ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು.
ಯೇಸು ಅವನಿಗೆ, “‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ, ಮನುಷ್ಯನ ಜೀವಿತವು ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.
ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು. ಅಪೊಸ್ತಲರು, “ಇಲ್ಲ” ಅಂದರು.
ನೀವು ಉಪದೇಶಗಳಿಗೂ ಒಡಂಬಡಿಕೆಗೂ ವಿಧೇಯರಾಗಿರಬೇಕು. ನೀವು ಈ ಆಜ್ಞೆಗಳನ್ನು ಅನುಸರಿಸದಿದ್ದರೆ, ತಪ್ಪು ಆಜ್ಞೆಗಳನ್ನು ಹಿಂಬಾಲಿಸುವಿರಿ. ಬೇತಾಳಿಕರಿಂದ, ಕಣಿಹೇಳುವವರಿಂದ ಬರುವ ಆಜ್ಞೆಗಳೇ ತಪ್ಪು ಆಜ್ಞೆಗಳು. ಅವುಗಳಿಗೆ ಯಾವ ಬೆಲೆಯೂ ಇಲ್ಲ. ಅವುಗಳನ್ನು ಅನುಸರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ.