ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.
ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”
ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು.
ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು.