ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ.
ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ: “ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು; ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”
ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.
“ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಪ್ರಿಯತಮರನ್ನು ತೆಗೆದುಹಾಕಲು ಹೇಳಿರಿ.