17 ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ.
ನಿಮ್ಮ ಬಾಣಗಳನ್ನು ಮಸೆಯಿರಿ. ನಿಮ್ಮ ಕವಚಗಳನ್ನು ಧರಿಸಿರಿ. ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
“ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು. ಅವನು ಪೂರ್ವದಿಕ್ಕಿನಿಂದ ಬರುವನು. ನನ್ನ ನಾಮವನ್ನು ಅವನು ಆರಾಧಿಸುವನು. ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು.
ನಡೆಯಲಿರುವ ಒಂದು ಭಯಂಕರ ಘಟನೆಯನ್ನು ನಾನು ದರ್ಶನದಲ್ಲಿ ನೋಡಿದ್ದೇನೆ. ನಿನಗೆ ವಿರುದ್ಧವಾಗಿ ದ್ರೋಹಿಗಳು ಏಳುತ್ತಿದ್ದಾರೆ. ನಿನ್ನ ಧನೈಶ್ವರ್ಯಗಳನ್ನು ಜನರು ಕಿತ್ತುಕೊಳ್ಳುತ್ತಿದ್ದಾರೆ. ಏಲಾಮೇ, ಹೋಗಿ ಆ ಜನರೊಂದಿಗೆ ಹೋರಾಡು. ಮೇದ್ಯವೇ, ಆ ಪಟ್ಟಣವನ್ನು ನಿನ್ನ ಸೈನ್ಯದಿಂದ ಸೋಲಿಸು. ಆ ನಗರದ ಎಲ್ಲಾ ದುಷ್ಟತನವನ್ನು ನಾನು ಕೊನೆಗಾಣಿಸುವೆನು.
ಉತ್ತರ ದಿಕ್ಕಿನ ಹಲವು ಜನಾಂಗಗಳನ್ನು ನಾನು ಒಟ್ಟುಗೂಡಿಸಿ ತರುವೆನು. ಆ ಜನಾಂಗಗಳ ಸಮುದಾಯವು ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತದೆ. ಬಾಬಿಲೋನ್ ಅವರಿಗೆ ವಶವಾಗುವುದು. ಆ ಜನಾಂಗಗಳ ಜನರು ಬಾಬಿಲೋನಿನ ಮೇಲೆ ಹಲವು ಬಾಣಗಳನ್ನು ಪ್ರಯೋಗ ಮಾಡುವರು. ಆ ಬಾಣಗಳೆಲ್ಲ ಬರಿಗೈಯಲ್ಲಿ ಯುದ್ಧದಿಂದ ಹಿಂದಿರುಗದ ಶೂರ ಸೈನಿಕರಂತಿರುವವು.
ಉತ್ತರದ ಒಂದು ಜನಾಂಗವು ಬಾಬಿಲೋನಿನ ಮೇಲೆ ಧಾಳಿ ಮಾಡುವುದು. ಆ ಜನಾಂಗವು ಬಾಬಿಲೋನನ್ನು ಒಂದು ಬರಿದಾದ ಮರುಭೂಮಿಯನ್ನಾಗಿ ಮಾಡುವದು. ಅಲ್ಲಿ ಯಾರೂ ವಾಸಮಾಡಲಾರರು. ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
ಅವರ ಸೈನಿಕರ ಹತ್ತಿರ ಬಿಲ್ಲುಗಳು ಮತ್ತು ಭರ್ಜಿಗಳು ಇವೆ. ಆ ಸೈನಿಕರು ಕ್ರೂರಿಗಳಾಗಿದ್ದಾರೆ. ಅವರಿಗೆ ದಯೆದಾಕ್ಷಿಣ್ಯ ಇಲ್ಲ. ಆ ಸೈನಿಕರು ತಮ್ಮ ಕುದುರೆಗಳ ಮೇಲೆ ಬರುತ್ತಿದ್ದಾರೆ. ಅವರ ಧ್ವನಿ ಆರ್ಭಟಿಸುವ ಸಮುದ್ರದಂತಿದೆ. ಅವರು ಯುದ್ಧಕ್ಕೆ ಸಿದ್ಧರಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದಾರೆ. ಬಾಬಿಲೋನ್ ನಗರವೇ, ಅವರು ನಿನ್ನ ಮೇಲೆ ಧಾಳಿಮಾಡಲು ಸಿದ್ಧರಾಗಿದ್ದಾರೆ.