ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ? ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ? ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ. ನೀನು ಹೀಗೇಕೆ ಮಾಡಿದೆ? ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು, ಆದರೆ ಒಳ್ಳೆಯದೇನೂ ಆಗಲಿಲ್ಲ. ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು. ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. “ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ. ಆದರೆ ಎಲ್ಲಾ ಚೆನ್ನಾಗಿಲ್ಲ.
ಆಗ ಯೆರೆಮೀಯನೆಂಬ ನಾನು, “ನನ್ನ ಒಡೆಯನಾದ ಯೆಹೋವನೇ, ನೀನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮೋಸ ಮಾಡಿದೆ, ‘ನೀವು ಶಾಂತಿಯಿಂದ ಇರುವಿರಿ’ ಎಂದು ನೀನು ಅವರಿಗೆ ಹೇಳಿದೆ. ಆದರೆ ಈಗ ಅವರ ಕತ್ತಿನ ಮೇಲೆ ಖಡ್ಗ ಇದೆ” ಅಂದೆನು.
ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು. ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು. ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು. ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.