ಬಾಬಿಲೋನಿನ ಜನರು ಓಡಿಹೋಗುತ್ತಿದ್ದಾರೆ. ಅವರು ಆ ದೇಶದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ. ಆ ಜನರು ಚೀಯೋನಿಗೆ ಬಂದು ಬಾಬಿಲೋನಿನಲ್ಲಿ ಯೆಹೋವನು ಮಾಡುತ್ತಿದ್ದ ವಿನಾಶದ ಬಗ್ಗೆ ಎಲ್ಲರಿಗೂ ಹೇಳುತ್ತಿದ್ದಾರೆ. ಯೆಹೋವನು ಬಾಬಿಲೋನಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಿರುವದರ ಬಗ್ಗೆ ಹೇಳುತ್ತಿದ್ದಾರೆ. ಬಾಬಿಲೋನ್ ಯೆಹೋವನ ಆಲಯವನ್ನು ನಾಶಮಾಡಿತು. ಆದ್ದರಿಂದ ಈಗ ಯೆಹೋವನು ಬಾಬಿಲೋನನ್ನು ನಾಶಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.
ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ. ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ. ಅವರು ಬಹಳ ಸಂತೋಷಪಡುವರು. ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು. ಅವರು ಹರ್ಷದಿಂದ ಹಾಡುವರು. ಅವರ ದುಃಖವೆಲ್ಲಾ ಬಹುದೂರವಾಗುವುದು.
ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು. ಜೆರುಸಲೇಮಿಗೆ ಹೀಗೆ ಹೇಳು, ‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು. ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’ ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”