ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ. ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ. ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ, ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ. ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ. ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
ಯೆಹೋವನು ಹೀಗೆಂದನು: “ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ. ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ. ಸ್ತೋತ್ರಗೀತೆಗಳನ್ನು ಹಾಡಿರಿ. ‘ಯೆಹೋವನು ತನ್ನ ಜನರನ್ನು ರಕ್ಷಿಸಿದನು. ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.