Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 2:8 - ಪರಿಶುದ್ದ ಬೈಬಲ್‌

8 “‘ಯೆಹೋವನು ಎಲ್ಲಿ?’ ಎಂದು ಯಾಜಕರು ಕೇಳಲಿಲ್ಲ. ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ. ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು. ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯಾಜಕರು, ‘ಯೆಹೋವನು ಎಲ್ಲಿ?’ ಎಂಬುದನ್ನು ವಿಚಾರಿಸಲಿಲ್ಲ. ಧರ್ಮೋಪದೇಶಕರು ನನ್ನನ್ನು ತಿಳಿಯಲ್ಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಯಾಜಕರು, ‘ಸರ್ವೇಶ್ವರ ಸ್ವಾಮಿ ಎಲ್ಲಿ? ಎಂದು ವಿಚಾರಿಸಲೇ ಇಲ್ಲ. ಧರ್ಮಶಾಸ್ತ್ರಿಗಳು ನನ್ನನ್ನು ಅರಿತುಕೊಳ್ಳಲಿಲ್ಲ. ಪ್ರಜಾಪಾಲಕರು ನನಗೆ ದ್ರೋಹಮಾಡಿದರು. ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದನೆ ಮಾಡಿದರು. ನಿರರ್ಥಕವಾದುವುಗಳನ್ನು ಪೂಜಿಸಿದರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯಾಜಕರಿಗೆ ಯೆಹೋವನು ಎಲ್ಲಿ ಎಂಬ ವಿಚಾರವೇ ಇರಲಿಲ್ಲ, ಧರ್ಮೋಪದೇಶಕರು ನನ್ನನ್ನು ತಿಳಿಯಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್‍ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಸೇವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯಾಜಕರು, ‘ಯೆಹೋವ ದೇವರು ಎಲ್ಲಿ?’ ಎಂದು ಕೇಳಲಿಲ್ಲ. ದೈವನಿಯಮವನ್ನು ಉಪದೇಶಿಸುವವರು ನನ್ನನ್ನು ತಿಳಿಯಲಿಲ್ಲ. ನಾಯಕರು ನನಗೆ ವಿರೋಧವಾಗಿ ದ್ರೋಹಮಾಡಿದರು. ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು. ಪ್ರಯೋಜನವಿಲ್ಲದವುಗಳನ್ನು ಹಿಂದಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 2:8
35 ತಿಳಿವುಗಳ ಹೋಲಿಕೆ  

ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ.


ಕುರುಬರು ಬುದ್ಧಿಗೇಡಿಗಳಾಗಿದ್ದಾರೆ. ಅವರು ಯೆಹೋವನನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲ. ಅವರು ಜ್ಞಾನಿಗಳಲ್ಲ, ಅವರ ಹಿಂಡುಗಳು ಚದರಿಹೋಗುವವು; ಕಳೆದುಹೋಗುವವು.


ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ. ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ದಂಡನೆಯ ಸಮಯ ಬಂದಾಗ ನೀವು ಏನು ಮಾಡುವಿರಿ?” ಎಂದನು.


ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು.


ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು.


“ನನ್ನ ಜನರು ಅಜ್ಞಾನಿಗಳಾಗಿರುವುದರಿಂದ ಅವರು ನಾಶವಾಗುವರು, ನೀವು ಕಲಿಯಲು ನಿರಾಕರಿಸುತ್ತೀರಿ. ಆದ್ದರಿಂದ ನೀವು ನನ್ನ ಯಾಜಕರಾಗಿರಲು ನಾನು ನಿರಾಕರಿಸುತ್ತೇನೆ. ನಿಮ್ಮ ದೇವರ ಕಟ್ಟಳೆಗಳನ್ನು ನೀವು ಮರೆತುಬಿಟ್ಟಿರುವಿರಿ. ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುವೆನು.


ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ.


“ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.


ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು?


ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ. ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ. ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು. ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು. ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು. ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.


ಅನೇಕ ಕುರುಬರು ದ್ರಾಕ್ಷಿತೋಟವನ್ನು ಹಾಳುಮಾಡಿದ್ದಾರೆ. ಆ ಕುರುಬರು ನನ್ನ ತೋಟದ ಸಸಿಗಳನ್ನು ತುಳಿದುಬಿಟ್ಟಿದ್ದಾರೆ: ನನ್ನ ಸುಂದರವಾದ ತೋಟವನ್ನು ಮರಳುಗಾಡನ್ನಾಗಿ ಮಾಡಿದ್ದಾರೆ.


“‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ.


ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ. ಅವರು ನನ್ನನ್ನು ಅರಿಯದವರಾಗಿದ್ದಾರೆ. ಅವರು ಮೂಢ ಮಕ್ಕಳಾಗಿದ್ದಾರೆ. ಅವರು ಅವಿವೇಕಿಗಳಾಗಿದ್ದಾರೆ. ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ. ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು.


ಯಾವ ಜನಾಂಗವಾದರೂ ಎಂದಾದರೂ ತಮ್ಮ ಹಳೆಯ ದೇವರುಗಳನ್ನು ಬದಲಾಯಿಸಿ ಹೊಸ ದೇವರುಗಳನ್ನು ಪಡೆಯಿತೇ? ಇಲ್ಲ. (ಅವರ ದೇವರುಗಳು ನಿಜವಾದ ದೇವರುಗಳೇ ಅಲ್ಲ.) ಆದರೆ ನನ್ನ ಜನರು ತಮ್ಮ ಮಹಿಮಾಶಾಲಿಯಾದ ದೇವರನ್ನು ಅಪ್ರಯೋಜಕವಾದ ವಿಗ್ರಹಗಳೊಂದಿಗೆ ಬದಲಾಯಿಸಿಕೊಂಡಿದ್ದಾರೆ.


‘ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ? ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ? ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ? ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ. ಯೆಹೋವನು ನಮ್ಮನ್ನು ಅಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು. ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ. ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ. ಈಗ ಆ ಯೆಹೋವನು ಎಲ್ಲಿದ್ದಾನೆ?’” ನಿಮ್ಮ ಪೂರ್ವಿಕರು ಆ ಪ್ರಶ್ನೆಗಳನ್ನು ಕೇಳಲೇ ಇಲ್ಲ.


ಆದರೆ ಅವರು ನಿರಾಶರಾಗುವರು. ತಮಗೆ ಸಹಾಯ ಮಾಡಲಶಕ್ಯವಾದ ರಾಜ್ಯಗಳಿಗೆ ಸಹಾಯಕ್ಕಾಗಿ ಹೋಗಿದ್ದಾರೆ. ಈಜಿಪ್ಟು, ನಿಷ್ಪ್ರಯೋಜಕವಾಗಿದೆ. ಅದು ಸಹಾಯ ಮಾಡದು. ಅದು ನಾಚಿಕೆ, ಅವಮಾನಗಳನ್ನು ಕೊಡುವದು.”


ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು. ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.) ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)


ಆದರೆ ಈಗ ಆ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ.


ಆಗ ಎಲೀಯನು, “ಬಾಳನ ಪ್ರವಾದಿಗಳನ್ನು ಹಿಡಿದು ತನ್ನಿ! ಅವರಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ!” ಎಂದು ಹೇಳಿದನು. ಪ್ರವಾದಿಗಳನ್ನೆಲ್ಲ ಜನರು ಹಿಡಿದುಕೊಂಡರು. ಎಲೀಯನು ಅವರನ್ನೆಲ್ಲಾ ಕೀಷೋನ್ ಬುಗ್ಗೆಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದನು.


ಮಧ್ಯಾಹ್ನದ ಸಮಯವು ಮೀರುತ್ತಾ ಬಂದರೂ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ. ಸಾಯಂಕಾಲದ ಯಜ್ಞಗಳನ್ನು ಅರ್ಪಿಸುವ ಸಮಯ ಬರುವ ತನಕ ಪ್ರವಾದಿಗಳು ಗಟ್ಟಿಯಾಗಿ ಕೂಗುತ್ತಲೇ ಇದ್ದರು. ಆದರೂ ಬಾಳನಿಂದ ಉತ್ತರವೇ ಬರಲಿಲ್ಲ. ಯಾವ ಶಬ್ದವೂ ಆಗಲಿಲ್ಲ; ಅವರ ಕೂಗಾಟವನ್ನು ಯಾರೂ ಲಕ್ಷಿಸಲಿಲ್ಲ.


ಎಲೀಯನು, “ಯೆಹೋವನ ಪ್ರವಾದಿಯಾಗಿ ನಾನೊಬ್ಬನು ಮಾತ್ರ ಇಲ್ಲಿದ್ದೇನೆ. ಆದರೆ ಇಲ್ಲಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳಿದ್ದಾರೆ.


ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ.


ಏಲಿಯ ಮಕ್ಕಳು ದುಷ್ಟರಾಗಿದ್ದರು. ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.


ಅವರು ಯಾಕೋಬ ವಂಶದವರಿಗೆ ನಿನ್ನ ವಿಧಿನಿಯಮಗಳನ್ನು ಕಲಿಸುವರು; ನಿನ್ನ ಕಟ್ಟಳೆಗಳನ್ನು ಇಸ್ರೇಲರಿಗೆ ಬೋಧಿಸುವರು. ಅವರು ನಿನ್ನ ಸನ್ನಿಧಾನದಲ್ಲಿ ಧೂಪಹಾಕುವರು. ಬಲಿಪೀಠದಲ್ಲಿ ನಿನಗೆ ಯಜ್ಞಾರ್ಪಣೆ ಮಾಡುವರು.


ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು. ಅವರು ಹಟಮಾರಿಗಳಾಗಿದ್ದರು. ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು. ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”


ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಬನ್ನಿ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದ್ದರಿಂದ ಅವನ ಬಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಬೇಕಾಗಿಲ್ಲ.”


“ಯಾಜಕರು ನನ್ನ ಉಪದೇಶವನ್ನು ನಿರಾಕರಿಸಿರುತ್ತಾರೆ; ಪರಿಶುದ್ಧ ವಸ್ತುಗಳನ್ನು ಸರಿಯಾಗಿ ಲಕ್ಷ್ಯ ಮಾಡುತ್ತಿಲ್ಲ; ಅವುಗಳಿಗೆ ಮಹತ್ವವನ್ನು ಕೊಡುತ್ತಿಲ್ಲ. ಅವರು ಪವಿತ್ರ ವಸ್ತುಗಳನ್ನು ಅಪವಿತ್ರ ವಸ್ತುಗಳಂತೆ ನೋಡುತ್ತಿದ್ದಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದರ ಬಗ್ಗೆ ಅವರು ಜನರಿಗೆ ಸರಿಯಾಗಿ ಉಪದೇಶಿಸುತ್ತಿಲ್ಲ. ನನ್ನ ವಿಶೇಷ ವಿಶ್ರಾಂತಿ ದಿವಸಗಳನ್ನು ಮಾನ್ಯ ಮಾಡುತ್ತಿಲ್ಲ. ನಾನು ಏನೂ ಅಲ್ಲವೆಂಬಂತೆ ನನ್ನನ್ನು ಅವರು ನೋಡುತ್ತಾರೆ.


“ನರಪುತ್ರನೇ, ನೀನು ಇಸ್ರೇಲರ ಕುರುಬರ ಸಂಗಡ ನನ್ನ ಪರವಾಗಿ ಮಾತನಾಡು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವರಿಗೆ ಹೇಳು, ‘ಇಸ್ರೇಲರ ಕುರುಬರೇ, ನೀವು ನೀವಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಇದು ಸರಿಯಲ್ಲ. ನಿಮ್ಮ ಮಂದೆಗೆ ನೀವು ಆಹಾರ ಯಾಕೆ ಒದಗಿಸುವುದಿಲ್ಲ?


ಆದರೆ ಆ ಕೆಟ್ಟ ಜನರು ಸಹಾಯಕ್ಕಾಗಿ ದೇವರನ್ನು ಕೇಳಿಕೊಳ್ಳುವುದಿಲ್ಲ. ಅವರು, ‘ನನ್ನನ್ನು ಸೃಷ್ಟಿಸಿದ ದೇವರೆಲ್ಲಿ?’ ಎಂದು ಕೇಳುವುದಿಲ್ಲ. ‘ಕುಗ್ಗಿಹೋದವರಿಗೆ ಸಹಾಯಮಾಡುವ ದೇವರೆಲ್ಲಿ?’ ಎಂದು ಕೇಳುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು