ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ: ಬಂಗಾರದ ಯಜ್ಞವೇದಿಕೆ; ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ); ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.) ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು; ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು; ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು.