ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.
“ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಈ ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು.
“ಒಬ್ಬನು ತನ್ನ ದನಗಳಲ್ಲಿ ಒಂದನ್ನು ಸರ್ವಾಂಗಹೋಮವಾಗಿ ಅರ್ಪಿಸಬಯಸಿದರೆ ಆ ಪಶುವು ಯಾವ ದೋಷವಿಲ್ಲದ ಹೋರಿಯಾಗಿರಬೇಕು. ಅವನು ಆ ಪಶುವನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಆಗ ಯೆಹೋವನು ಆ ಸಮರ್ಪಣೆಯನ್ನು ಮೆಚ್ಚಿಕೊಳ್ಳುವನು.