ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು.
ಯೇಸು ಆ ಪ್ರದೇಶದಲ್ಲಿದ್ದ ಪಟ್ಟಣಗಳಿಗೆ, ನಗರಗಳಿಗೆ ಮತ್ತು ತೋಟಗಳಿಗೆ ಹೋದನು. ಆತನು ಹೋದ ಕಡೆಗಳಲ್ಲೆಲ್ಲಾ ಜನರು ಮಾರುಕಟ್ಟೆಯ ಸ್ಥಳಗಳಿಗೆ ಕಾಯಿಲೆಯ ಜನರನ್ನು ಕರೆತಂದರು. ಅವರು ಯೇಸುವಿಗೆ, ನಿನ್ನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ತಮಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡರು. ಆತನನ್ನು ಸ್ಪರ್ಶಿಸಿದ ಜನರೆಲ್ಲರಿಗೂ ಗುಣವಾಯಿತು.
ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು.