ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.
ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು.
ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು.