ಆದರೆ ಯೆಹೋವನು ಹೇಳುವುದೇನೆಂದರೆ, “ನಿನ್ನ ಜನರು ಸತ್ತಿದ್ದಾರೆ. ಆದರೆ ಅವರು ಮತ್ತೆ ಬದುಕುವರು. ನನ್ನ ಜನರ ದೇಹಗಳು ಸತ್ತವರೊಳಗಿಂದ ಏಳುವವು. ಭೂಮಿಯ ಮೇಲೆ ಸತ್ತಿರುವ ಜನರೇ, ಎದ್ದುನಿಂತು ಸಂತೋಷಿಸಿರಿ. ನಿಮ್ಮನ್ನು ಆವರಿಸಿದ ಮಂಜು ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ. ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”
ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.
ಮರಣಹೊಂದಿದ, ಸಮಾಧಿಗಳಲ್ಲಿ ದೀರ್ಘನಿದ್ರೆ ಮಾಡುತ್ತಿದ್ದವರಲ್ಲಿ ಅನೇಕರು ಎಚ್ಚೆತ್ತುಕೊಳ್ಳುವರು. ಕೆಲವರು ಎಚ್ಚೆತ್ತು ನಿತ್ಯಜೀವವನ್ನು ಅನುಭವಿಸುವರು. ಕೆಲವರು ಎಚ್ಚೆತ್ತು ನಿತ್ಯನಿಂದನೆಗಳನ್ನೂ ತಿರಸ್ಕಾರಗಳನ್ನೂ ಅನುಭವಿಸುವರು.
ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.
ಇಸ್ರೇಲರಲ್ಲಿ ಕೆಲವರು ಸತ್ತವನೊಬ್ಬನನ್ನು ಸಮಾಧಿ ಮಾಡುತ್ತಿರುವಾಗ ಸೈನಿಕರ ಆ ಗುಂಪನ್ನು ನೋಡಿ ಸತ್ತವನನ್ನು ಎಲೀಷನ ಸಮಾಧಿಯಲ್ಲಿ ಎಸೆದು ಓಡಿಹೋದರು. ಎಲೀಷನ ಮೂಳೆಗಳನ್ನು ಸತ್ತವನು ಸ್ಪರ್ಶಿಸಿದ ತಕ್ಷಣ, ಸತ್ತ ಮನುಷ್ಯನಿಗೆ ಜೀವ ಬಂದು, ಅವನು ತನ್ನ ಕಾಲುಗಳ ಮೇಲೆ ನಿಂತುಕೊಂಡನು!