23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು.
23 ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.
23 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪುದೀನ, ಸದಾಪು, ಜೀರಿಗೆಗಳ ದಶಮಭಾಗವನ್ನು ಸಲ್ಲಿಸುತ್ತೀರಿ. ಆದರೆ ನಿಯಮದ ನ್ಯಾಯನೀತಿ, ಕರುಣೆ, ನಂಬಿಕೆ ಎಂಬ ಈ ಪ್ರಮುಖವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗಳೊಂದಿಗೆ ಆ ಬೇರೆಯವುಗಳನ್ನು ಬಿಟ್ಟುಬಿಡದೆ ಮಾಡಬೇಕಾಗಿತ್ತು.
“ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.
ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ. ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ, ಇತರರಿಗೆ ನೀನು ಅನ್ಯಾಯ ಮಾಡದಿರು. ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು. ದೀನತೆಯಿಂದ ನಿನ್ನ ದೇವರಿಗೆ ವಿಧೇಯನಾಗಿರು.
ನೀವು ಹೋಗಿ, ‘ನನಗೆ ಯಜ್ಞ ಬೇಡ, ದಯೆ ಬೇಕು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.
ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ.
‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’ ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.
ವ್ಯವಸಾಯಗಾರನು ಮಣ್ಣನ್ನು ಹಸನುಮಾಡಿ ನಂತರ ಬೀಜ ಬಿತ್ತುವನು. ಬೇರೆಬೇರೆ ತರದ ಬೀಜಗಳನ್ನು ಬೇರೆಬೇರೆ ರೀತಿಯಲ್ಲಿ ಬಿತ್ತುವನು. ಅವನು ಗೋಧಿಯನ್ನಾಗಲಿ ಬಾರ್ಲಿಯನ್ನಾಗಲಿ ನೆಲದ ಮೇಲೆ ಬಿಸಾಡುವನು. ಗೋಧಿಯನ್ನು ಸಾಲಾಗಿ ಬಿತ್ತುವನು. ಬೇರೆಬೇರೆ ಗಿಡಗಳ ಬೀಜವನ್ನು ಬೇರೆಬೇರೆ ಸ್ಥಳಗಳಲ್ಲಿಯೂ ಬೇರೆಬೇರೆ ವಿಧಾನದಲ್ಲಿಯೂ ಬಿತ್ತುವನು.
“ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ.