ಹನ್ನೆರಡು ಪ್ರಧಾನರಲ್ಲಿ ಪ್ರತಿಯೊಬ್ಬನೂ ತನ್ನ ಕಾಣಿಕೆಯನ್ನು ತಂದನು. ಅವರು ಕೊಟ್ಟ ಕಾಣಿಕೆಗಳು ಹೀಗಿವೆ: ಪ್ರತಿಯೊಬ್ಬ ಪ್ರಧಾನನು ಮೂರುಕಾಲು ಪೌಂಡು ತೂಕವುಳ್ಳ ಬೆಳ್ಳಿಯ ತಟ್ಟೆಯನ್ನೂ ಒಂದು ಮುಕ್ಕಾಲು ಪೌಂಡು ತೂಕವುಳ್ಳ ಬೆಳ್ಳಿಯ ಬಟ್ಟಲನ್ನೂ ತಂದನು. ಇವೆರಡನ್ನೂ ಅಧಿಕೃತ ಅಳತೆಯಿಂದ ತೂಕ ಮಾಡಲಾಯಿತು. ಧಾನ್ಯಸಮರ್ಪಣೆಗಾಗಿ ಉಪಯೋಗವಾಗುವ ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟನ್ನು ಬಟ್ಟಲಲ್ಲಿ ಮತ್ತು ತಟ್ಟೆಯಲ್ಲಿ ತುಂಬಿಡಲಾಗಿತ್ತು. ಧೂಪದ್ರವ್ಯ ತುಂಬಿದ್ದ ನಾಲ್ಕು ತೊಲೆ ತೂಕವುಳ್ಳ ಚಿನ್ನದ ಧೂಪಾರತಿಯನ್ನೂ ಒಂದು ಎಳೆಯ ಹೋರಿಯನ್ನೂ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಗಂಡು ಕುರಿಮರಿಯನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಸಮಾಧಾನಯಜ್ಞಕ್ಕಾಗಿ ಎರಡು ಎತ್ತುಗಳನ್ನೂ ಐದು ಟಗರುಗಳನ್ನೂ ಐದು ಹೋತಗಳನ್ನೂ ಒಂದು ವರ್ಷದ ಐದು ಗಂಡು ಕುರಿಮರಿಗಳನ್ನೂ ಪ್ರತಿಯೊಬ್ಬ ಯಾಜಕನೂ ತಂದನು. ಇವೆಲ್ಲವೂ ಯಜ್ಞವಾಗಿ ಸಮರ್ಪಿಸಲ್ಪಟ್ಟವು. ಮೊದಲನೆಯ ದಿನದಲ್ಲಿ ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗನಾದ ನಹಶೋನನು ತನ್ನ ಕಾಣಿಕೆಗಳನ್ನು ತಂದನು. ಎರಡನೆಯ ದಿನದಲ್ಲಿ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗನಾದ ನೆತನೇಲನು ತನ್ನ ಕಾಣಿಕೆಗಳನ್ನು ತಂದನು. ಮೂರನೆಯ ದಿನದಲ್ಲಿ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗನಾದ ಎಲೀಯಾಬನು ತನ್ನ ಕಾಣಿಕೆಗಳನ್ನು ತಂದನು. ನಾಲ್ಕನೆಯ ದಿನದಲ್ಲಿ ರೂಬೇನ್ ಕುಲಾಧಿಪತಿ ಶೆದೇಯೂರನ ಮಗನಾದ ಎಲೀಚೂರನು ತನ್ನ ಕಾಣಿಕೆಗಳನ್ನು ತಂದನು. ಐದನೆಯ ದಿನದಲ್ಲಿ ಸಿಮೆಯೋನ್ ಕುಲಾಧಿಪತಿ ಚೂರೀಷದ್ದೈಯ ಮಗನಾದ ಶೆಲುಮೀಯೇಲನು ತನ್ನ ಕಾಣಿಕೆಗಳನ್ನು ತಂದನು. ಆರನೆಯ ದಿನದಲ್ಲಿ ಗಾದ್ ಕುಲಾಧಿಪತಿ ದೆಗೂವೇಲನ ಮಗನಾದ ಎಲ್ಯಾಸಾಫನು ತನ್ನ ಕಾಣಿಕೆಗಳನ್ನು ತಂದನು. ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿ ಅಮ್ಮೀಹೂದನ ಮಗನಾದ ಎಲೀಷಾಮನು ತನ್ನ ಕಾಣಿಕೆಗಳನ್ನು ತಂದನು. ಎಂಟನೆಯ ದಿನದಲ್ಲಿ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗನಾದ ಗಮ್ಲೀಯೇಲನು ತನ್ನ ಕಾಣಿಕೆಗಳನ್ನು ತಂದನು. ಒಂಭತ್ತನೆಯ ದಿನದಲ್ಲಿ ಬೆನ್ಯಾಮೀನ್ ಕುಲಾಧಿಪತಿ ಗಿದ್ಯೋನಿಯ ಮಗನಾದ ಅಬೀದಾನನು ತನ್ನ ಕಾಣಿಕೆಗಳನ್ನು ತಂದನು. ಹತ್ತನೆಯ ದಿನದಲ್ಲಿ ದಾನ್ ಕುಲಾಧಿಪತಿ ಅಮ್ಮೀಷದ್ದೈನ ಮಗನಾದ ಅಹೀಗೆಜರನು ತನ್ನ ಕಾಣಿಕೆಗಳನ್ನು ತಂದನು. ಹನ್ನೊಂದನೆಯ ದಿನದಲ್ಲಿ ಆಶೇರ್ ಕುಲಾಧಿಪತಿ ಒಕ್ರಾನನ ಮಗನಾದ ಪಗೀಯೇಲನು ತನ್ನ ಕಾಣಿಕೆಗಳನ್ನು ತಂದನು. ಹನ್ನೆರಡನೆಯ ದಿನದಲ್ಲಿ ನಫ್ತಾಲಿ ಕುಲಾಧಿಪತಿ ಏನಾನನ ಮಗನಾದ ಅಹೀರನು ತನ್ನ ಕಾಣಿಕೆಗಳನ್ನು ತಂದನು.