ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು.
ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು.
ಅಂಥ ಮನುಷ್ಯನಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸುವನು.
ಒಂದು ಸಾರಿ ಬಾಬಿಲೋನಿನವರು ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿದರು. ಅವರು ದೇಶದಲ್ಲಿ ಆದ ಅದ್ಭುತ ವಿಷಯದ ಬಗ್ಗೆ ವಿಚಾರಿಸಿದರು. ಅವರು ಹಿಜ್ಕೀಯನ ಬಳಿಗೆ ಬಂದಾಗ ದೇವರು ಅವನನ್ನು ಪರೀಕ್ಷಿಸುವುದಕ್ಕಾಗಿಯೂ ಅವನ ಹೃದಯದಲ್ಲಿದ್ದ ಪ್ರತಿಯೊಂದು ಆಲೋಚನೆಯನ್ನು ತಿಳಿದುಕೊಳ್ಳುವುದಕ್ಕಾಗಿಯೂ ಅವನನ್ನು ತೊರೆದುಬಿಟ್ಟನು.
ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು. ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು.
ಯೆಹೋವನು ಆ ಜನಾಂಗಗಳನ್ನು ಆ ಪ್ರದೇಶದಲ್ಲಿ ಇರುವುದಕ್ಕೆ ಬಿಟ್ಟನು. ಆ ಜನಾಂಗಗಳು ಈ ದೇಶವನ್ನು ಬಿಟ್ಟು ಹೋಗುವಂತೆ ಯೆಹೋವನು ಒತ್ತಾಯಪಡಿಸಲಿಲ್ಲ. ಅವರನ್ನು ಸೋಲಿಸಲು ಯೆಹೋಶುವನ ಸೈನ್ಯಕ್ಕೆ ಸಹಾಯ ಮಾಡಲಿಲ್ಲ.