ಅರ್ತಷಸ್ತ ರಾಜರೇ, ನಿಮ್ಮ ಸನ್ನಿಧಾನದಲ್ಲಿ ನಾವು ತಿಳಿಸುವ ವಿಷಯವೇನೆಂದರೆ, ನೀವು ಕಳುಹಿಸಿರುವ ಯೆಹೂದ್ಯರು ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ನಗರವಾದ ಜೆರುಸಲೇಮನ್ನು ತಿರುಗಿ ಕಟ್ಟುತ್ತಿದ್ದಾರೆ. ಜೆರುಸಲೇಮ್ ಕೆಟ್ಟ ನಗರವಾಗಿದೆ. ಅದರ ನಿವಾಸಿಗಳು ಯಾವಾಗಲೂ ಬೇರೆ ಅರಸುಗಳಿಗೆ ಎದುರು ಬೀಳುವವರಾಗಿದ್ದಾರೆ. ಈಗ ಆ ಯೆಹೂದ್ಯರು ಅಸ್ತಿವಾರವನ್ನು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾರೆ.
ರಾಜನೇ, ನಾವು ಯೆಹೂದ ಪ್ರಾಂತ್ಯವನ್ನು ಸಂದರ್ಶಿಸಿದ್ದೇವೆಂದು ನಿಮಗೆ ತಿಳಿಸುತ್ತೇವೆ. ಅಲ್ಲಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಯೆಹೂದ ಪ್ರಾಂತ್ಯದ ಜನರು ದೊಡ್ಡ ಕಲ್ಲುಗಳಿಂದ ದೇವಾಲಯವನ್ನು ಕಟ್ಟುತ್ತಿದ್ದಾರೆ. ದೊಡ್ಡದೊಡ್ಡ ಮರದ ತೊಲೆಗಳನ್ನು ಗೋಡೆಯ ಮೇಲೆ ಕುಳ್ಳಿರಿಸಿದ್ದಾರೆ. ಯೆಹೂದ ಪ್ರಾಂತ್ಯದ ಜನರು ಜಾಗರೂಕತೆಯಿಂದಲೂ ತುಂಬ ಪ್ರಯಾಸದಿಂದಲೂ ಕಾರ್ಯವನ್ನು ನಡಿಸುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮುಂದುವರಿಯುತ್ತಿರುವದರಿಂದ ದೇವಾಲಯವು ಬೇಗನೆ ಸಂಪೂರ್ಣವಾಗಬಹುದು.