ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ. ದೇವರ ಜ್ಞಾನಕ್ಕೆ ಸಮಾನವಾದ ಜ್ಞಾನವೂ ಬುದ್ಧಿಯೂ ರಹಸ್ಯವನ್ನು ತಿಳಿದುಕೊಳ್ಳುವ ಶಕ್ತಿಯೂ ತನಗಿರುವುದಾಗಿ ಅವನು ನಿನ್ನ ತಂದೆಯ ಕಾಲದಲ್ಲಿಯೇ ತೋರಿಸಿಕೊಟ್ಟಿದ್ದಾನೆ. ನಿನ್ನ ತಂದೆಯಾದ ನೆಬೂಕದ್ನೆಚ್ಚರನು ಈ ಮನುಷ್ಯನನ್ನು ಎಲ್ಲ ವಿದ್ವಾಂಸರ ಅಧ್ಯಕ್ಷನನ್ನಾಗಿ ನೇಮಿಸಿದ್ದನು. ಎಲ್ಲ ಜೋಯಿಸರಿಗೆ, ಮಂತ್ರವಾದಿಗಳಿಗೆ, ಶಾಕುನಿಕರಿಗೆ ಮತ್ತು ಪಂಡಿತರಿಗೆ ಇವನು ಮುಖ್ಯಸ್ಥನಾಗಿದ್ದನು.