8 ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ.
ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!”
ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.
ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.
ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು.
ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು. ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು. ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು.
ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ.
ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ. ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ. ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ. ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
ನಾನೇ ಯೆಹೋವನು, ನಾನು ಮನುಷ್ಯನ ಹೃದಯದ ಆಳವನ್ನು ನೋಡಬಲ್ಲೆ, ಮನುಷ್ಯನ ಬುದ್ಧಿಯನ್ನು ಪರೀಕ್ಷಿಸಬಲ್ಲೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನ್ನು ನಾನು ನಿರ್ಧರಿಸಬಲ್ಲೆ. ಪ್ರತಿಯೊಬ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನ್ನು ಕೊಡುವೆನು.
ಆದರೆ ಯೆಹೋವನೇ, ನೀನು ನ್ಯಾಯಪರನಾದ ತೀರ್ಪುಗಾರ. ಜನರ ಹೃದಯವನ್ನು ಮತ್ತು ಬುದ್ಧಿಯನ್ನು ಹೇಗೆ ಪರೀಕ್ಷಿಸಬೇಕೆಂದು ನಿನಗೆ ಗೊತ್ತು. ನಾನು ನನ್ನ ವಾದವನ್ನು ನಿನ್ನ ಮುಂದೆ ಮಂಡಿಸುತ್ತೇನೆ ಮತ್ತು ನೀನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು ಎಂದು ಅರಿಕೆ ಮಾಡಿಕೊಳ್ಳುತ್ತೇನೆ.
“ನನ್ನ ಮಗನಾದ ಸೊಲೊಮೋನನೇ, ನಿನ್ನ ತಂದೆಯ ದೇವರನ್ನು ನೀನು ಚೆನ್ನಾಗಿ ಅರಿತುಕೋ. ನೀನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ನಿನ್ನ ದೇವರನ್ನು ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ನೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ಪ್ರಾರ್ಥನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬಿಟ್ಟರೆ ಆತನು ನಿನ್ನನ್ನು ಬಿಟ್ಟುಹೋಗುವನು.
ದಯವಿಟ್ಟು ಅವನ ಪ್ರಾರ್ಥನೆಯನ್ನು ನಿನ್ನ ನಿವಾಸವಾದ ಪರಲೋಕದಿಂದ ಆಲಿಸಿ, ಜನರನ್ನು ಕ್ಷಮಿಸಿ, ಅವರಿಗೆ ಸಹಾಯ ಮಾಡು. ಜನರು ನಿಜವಾಗಿ ಆಲೋಚಿಸುವ ಸಂಗತಿಗಳು ನಿನಗೆ ಮಾತ್ರ ತಿಳಿದಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತೀರ್ಪುನೀಡು ಮತ್ತು ಅವನಿಗೆ ನ್ಯಾಯವಾದದ್ದನ್ನು ಮಾಡು.
ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.
ನನ್ನ ದೇವರೇ, ಜನರ ಹೃದಯಗಳನ್ನು ಪರೀಕ್ಷಿಸುವೆ. ಜನರು ಒಳ್ಳೆಯ ಕಾರ್ಯವನ್ನು ಯಥಾರ್ಥವಾದ ಹೃದಯದಿಂದ ಮಾಡುವಾಗ ನೀನು ಸಂತೋಷಪಡುವೆ. ಈ ವಸ್ತುಗಳನ್ನೆಲ್ಲಾ ನಾನು ಶುದ್ಧಹೃದಯದಿಂದ ಕೊಡುತ್ತಿದ್ದೇನೆ. ಇಲ್ಲಿ ನೆರೆದುಬಂದಿರುವವರೆಲ್ಲರೂ ನಿನಗೆ ಕಾಣಿಕೆಯನ್ನು ಸ್ವಯಿಚ್ಛೆಯಿಂದ ಕೊಟ್ಟಿದ್ದಾರೆ.