ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ.