ಅಮ್ನೋನನು ಹಾಸಿಗೆಯಲ್ಲಿ ಮಲಗಿ ಕಾಯಿಲೆಯವನಂತೆ ನಟಿಸಿದನು. ಅವನನ್ನು ನೋಡಲು ರಾಜನಾದ ದಾವೀದನು ಅಲ್ಲಿಗೆ ಬಂದನು. ಅಮ್ನೋನನು ರಾಜನಾದ ದಾವೀದನಿಗೆ, “ದಯವಿಟ್ಟು ನನ್ನ ಸೋದರಿಯಾದ ತಾಮಾರಳನ್ನು ಒಳಕ್ಕೆ ಕರೆಯಿರಿ. ನಾನು ನೋಡುತ್ತಿರುವಂತೆ ಅವಳು ನನಗಾಗಿ ಎರಡು ಸಿಹಿ ರೊಟ್ಟಿಗಳನ್ನು ತಯಾರಿಸಲಿ. ಅವಳ ಕೈಗಳಿಂದ ಮಾಡಿದ ರೊಟ್ಟಿಗಳನ್ನೇ ನಾನು ತಿನ್ನುತ್ತೇನೆ” ಎಂದು ಬೇಡಿಕೊಂಡನು.
ತಾಮಾರಳು ತನ್ನ ಸೋದರನಾದ ಅಮ್ನೋನನ ಮನೆಗೆ ಹೋದಳು. ಅಮ್ನೋನನು ಹಾಸಿಗೆಯಲ್ಲಿ ಮಲಗಿದ್ದನು. ತಾಮಾರಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ಕಲಸಿ ಅಮ್ನೋನನ ಕಣ್ಣೆದುರಿನಲ್ಲಿಯೇ ನಾದಿದಳು. ನಂತರ ಅವಳು ನಾದಿದ ಹಿಟ್ಟನ್ನು ಸುಟ್ಟು, ರೊಟ್ಟಿಗಳನ್ನು ಮಾಡಿದಳು.