ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.
ಆದರೆ ಒಬ್ಬ ಸಿಪಾಯಿಯು ಬಿಲ್ಲು ತೆಗೆದು ಬಾಣವನ್ನು ಹೂಡಿ ಗುರಿಯಿಲ್ಲದೆ ಹೊಡೆದಾಗ ಆ ಬಾಣವು ಬಂದು ಇಸ್ರೇಲರ ರಾಜನಾದ ಅಹಾಬನಿಗೆ ತಾಗಿತು. ಅವನ ಕವಚದ ಸಂದಿನಿಂದ ಅವನ ದೇಹದೊಳಗೆ ಹೊಕ್ಕಿತು. ಆಗ ಅವನು ತನ್ನ ರಥವನ್ನೋಡಿಸುವ ರಾಹುತನಿಗೆ, “ರಥವನ್ನು ಹಿಂದಕ್ಕೆ ತಿರುಗಿಸಿ ನನ್ನನ್ನು ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋಗು. ನಾನು ಗಾಯಗೊಂಡಿದ್ದೇನೆ” ಅಂದನು.
ರಾಜ ಯೋರಾಮನು ಹಜಾಯೇಲನ ವಿರುದ್ಧವಾಗಿ ಹೋರಾಡಿದಾಗ ರಾಮಾದಲ್ಲಿ ಅರಾಮ್ಯದಿಂದ ತನಗಾದ ಗಾಯಗಳನ್ನು ಗುಣಪಡಿಸಿಕೊಳ್ಳಲು ಇಸ್ರೇಲಿನ ರಾಜನು ಇಜ್ರೇಲ್ ಎಂಬ ಪಟ್ಟಣಕ್ಕೆ ಹಿಂತಿರುಗಿದನು. ಯೆಹೂದದ ರಾಜನೂ ಯೆಹೋರಾಮನ ಮಗನೂ ಆದ ಅಹಜ್ಯನು, ಅಹಾಬನ ಮಗನಾದ ಯೋರಾಮನನ್ನು ನೋಡಲು ಇಜ್ರೇಲಿಗೆ ಹೋದನು. ಯಾಕೆಂದರೆ ಅವನಿಗೆ ಕಾಯಿಲೆಯಾಗಿತ್ತು.
ಆದರೆ ಅರಸನಾದ ಯೋಷೀಯನು ಹಿಂದಕ್ಕೆ ಹೋಗಲಿಲ್ಲ. ಅವನು ನೆಕೋನನ್ನು ಎದುರಿಸಲು ನಿರ್ಧರಿಸಿದನು. ತನ್ನ ವೇಷ ಬದಲಾಯಿಸಿ ಯುದ್ಧಕ್ಕೆ ಹೋದನು. ದೇವರ ಅಪ್ಪಣೆಯ ಬಗ್ಗೆ ನೆಕೋ ಹೇಳಿದ್ದನ್ನು ಕೇಳಲು ಯೋಷೀಯನು ನಿರಾಕರಿಸಿ ಮೆಗಿದ್ದೋ ಕಣಿವೆಯಲ್ಲಿ ಯುದ್ಧಕ್ಕೆ ಹೊರಟನು.
ಆಗ ಸೇವಕರು ಯೋಷೀಯನನ್ನು ಅವನಿದ್ದ ರಥದಿಂದ ತೆಗೆದು ಅವನ ಜೊತೆಯಲ್ಲಿ ತಂದಿದ್ದ ಇನ್ನೊಂದು ರಥದಲ್ಲಿ ಹಾಕಿ ರಣರಂಗದಿಂದ ನೇರವಾಗಿ ಜೆರುಸಲೇಮಿಗೆ ಕೊಂಡೊಯ್ದರು. ಅಲ್ಲಿ ಅವನು ಸತ್ತನು. ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅವನು ಸತ್ತದ್ದನ್ನು ಕೇಳಿ ಯೆಹೂದದ ಮತ್ತು ಜೆರುಸಲೇಮಿನ ಜನರು ತುಂಬಾ ಶೋಕಿಸಿದರು.