ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು.