ಕೊರಿಂಥದಲ್ಲಿ ಪೌಲನು ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅಕ್ವಿಲನು ಪೊಂತ ಎಂಬ ನಾಡಿನವನು. ಆದರೆ ಅಕ್ವಿಲ ಮತ್ತು ಅವನ ಹೆಂಡತಿ ಪ್ರಿಸ್ಕಿಲ್ಲ ಇಟಲಿಯಿಂದ ಕೊರಿಂಥಕ್ಕೆ ಇತ್ತೀಚಿಗೆ ಬಂದಿದ್ದರು. ಎಲ್ಲಾ ಯೆಹೂದ್ಯರು ರೋಮನ್ನು ಬಿಟ್ಟುಹೋಗಬೇಕೆಂದು ಕ್ಲಾಡಿಯಸನು ಆಜ್ಞಾಪಿಸಿದ್ದರಿಂದ ಅವರು ಇಟಲಿಯನ್ನು ಬಿಟ್ಟುಬಂದಿದ್ದರು. ಪೌಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾಗಲು ಹೋದನು.