ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು.
ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.
ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.
ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.
ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು.
ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದೆನು. ಅದು ಸಮರ್ಪಕವೆಂದು ನೀವು ನಿರೂಪಿಸಿದಿರಿ. ನಾವು ನಿಮಗೆ ಹೇಳಿದ ಪ್ರತಿಯೊಂದೂ ಸತ್ಯವಾಗಿತ್ತು. ನಾವು ತೀತನ ಮುಂದೆ ನಿಮ್ಮ ವಿಷಯದಲ್ಲಿ ಹೇಳಿದ ಹೊಗಳಿಕೆಯ ಮಾತುಗಳೆಲ್ಲಾ ಸತ್ಯವೆಂದು ನೀವು ನಿರೂಪಿಸಿದಿರಿ.
ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ.
ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.