17 ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.
17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.
17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.
17 ಆದರೆ ನಾವು ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶ ಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.
17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ.
ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು.
ನಾವು ಈ ವಿಷಯದಲ್ಲಿ ಹೆಮ್ಮೆಪಡುತ್ತೇವೆ ಮತ್ತು ಇದು ಸತ್ಯವೆಂದು ನಾನು ಹೃದಯಪೂರ್ವಕವಾಗಿ ಹೇಳಬಲ್ಲೆನು. ಅದೇನೆಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಡಲ್ಪಟ್ಟ ಯಥಾರ್ಥವಾದ ಮತ್ತು ಪರಿಶುದ್ಧವಾದ ಹೃದಯದಿಂದ ಮಾಡಿದೆವು. ನಾವು ನಿಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳಲ್ಲಂತೂ ಇದು ಮತ್ತಷ್ಟು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಪೆಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ.
ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.
ಕೆಲವು ಜನರು ರಹಸ್ಯವಾಗಿ ನಿಮ್ಮ ಸಭೆಯಲ್ಲಿ ಪ್ರವೇಶಿಸಿದ್ದಾರೆ. ಇವರಿಗಾಗುವ ದಂಡನೆಯ ಕುರಿತು ಬಹುಕಾಲದ ಹಿಂದೆಯೇ ಪ್ರವಾದಿಗಳು ಬರೆದಿದ್ದಾರೆ. ಈ ಜನರು ದೇವರಿಗೆ ವಿರುದ್ಧವಾಗಿದ್ದಾರೆ. ಅವರು ಪಾಪಕೃತ್ಯಗಳನ್ನು ಮಾಡುವುದಕ್ಕಾಗಿ ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಅವರು ನಮ್ಮ ಒಬ್ಬನೇ ಒಡೆಯನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನನ್ನು ಹಿಂಬಾಲಿಸದವರಾಗಿದ್ದಾರೆ.
ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ.
ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ. ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ದಂಡನೆಯ ಸಮಯ ಬಂದಾಗ ನೀವು ಏನು ಮಾಡುವಿರಿ?” ಎಂದನು.
ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು.
ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು.
ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.
ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ.
ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ.
ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.
ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.