ನಾವು ಸ್ವರ್ಗದ ರಾಣಿಗೆ ನೈವೇದ್ಯವನ್ನು ಅರ್ಪಿಸುವದಾಗಿ ಹರಕೆ ಮಾಡಿದ್ದೇವೆ ಮತ್ತು ನಮ್ಮ ಹರಕೆಗಳನ್ನೆಲ್ಲ ಪೂರೈಸುತ್ತೇವೆ. ನಾವು ನೈವೇದ್ಯವನ್ನು ಕೊಡುತ್ತೇವೆ ಮತ್ತು ಅವಳ ಪೂಜೆಗಾಗಿ ಪಾನನೈವೇದ್ಯವನ್ನು ಅರ್ಪಿಸುತ್ತೇವೆ. ನಾವು ಮೊದಲು ಹಾಗೆಯೇ ಮಾಡಿದ್ದೇವೆ. ನಮ್ಮ ಪೂರ್ವಿಕರು, ನಮ್ಮ ರಾಜರು, ನಮ್ಮ ಅಧಿಕಾರಿಗಳು ಮೊದಲು ಮಾಡಿದಂತೆಯೇ ನಾವೆಲ್ಲರೂ ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಪಟ್ಟಣಗಳಲ್ಲಿ ಮಾಡಿದ್ದೆವು. ನಾವು ಸ್ವರ್ಗದ ರಾಣಿಯನ್ನು ಪೂಜಿಸುವ ಕಾಲದಲ್ಲಿ ನಮ್ಮಲ್ಲಿ ಸಾಕಷ್ಟು ಆಹಾರವಿತ್ತು. ನಾವು ಜಯಶೀಲರಾಗಿದ್ದೆವು. ನಮಗೆ ಕೆಟ್ಟದ್ದೇನೂ ಆಗಿರಲಿಲ್ಲ.