ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು.
ದಾವೀದನೂ ಅರಸನ ದರ್ಶಿಯಾಗಿದ್ದ ಗಾದನೂ ಮತ್ತು ಪ್ರವಾದಿಯಾಗಿದ್ದ ನಾತಾನನೂ ಆಜ್ಞಾಪಿಸಿದಂತೆ, ಅರಸನಾದ ಹಿಜ್ಕೀಯನು ಲೇವಿಯರನ್ನು ತಾಳ, ತಂತಿವಾದ್ಯ ಮತ್ತು ಕಿನ್ನರಿಗಳೊಂದಿಗೆ ದೇವಾಲಯದಲ್ಲಿ ಇರಿಸಿದನು. ಈ ಆಜ್ಞೆಯು ಯೆಹೋವನಿಂದ ಪ್ರವಾದಿಗಳ ಮೂಲಕ ಬಂದಿತ್ತು.
ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು.
ದಾವೀದನು ಸೊಲೊಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು.
ಆ ಬಳಿಕ ಯೆಹೋಯಾದನು ದೇವಾಲಯದೊಳಗೆ ಸೇವೆಮಾಡುವ ಜವಾಬ್ದಾರಿಕೆಯನ್ನು ಕೆಲವು ಯಾಜಕರಿಗೆ ವಹಿಸಿದನು. ಅವರೆಲ್ಲಾ ಲೇವಿಯರಾಗಿದ್ದರು. ದಾವೀದನು ಅವರಿಗೆ ದೇವಾಲಯದ ಜವಾಬ್ದಾರಿಕೆಯನ್ನು ಕೊಟ್ಟಿದ್ದನು. ಮೋಶೆಯು ಕೊಟ್ಟಿದ್ದ ನಿಯಮಕ್ಕನುಸಾರವಾಗಿ ಅವರು ಸರ್ವಾಂಗಹೋಮವನ್ನು ಅರ್ಪಿಸಿದರು. ದಾವೀದನು ಆಜ್ಞಾಪಿಸಿದಂತೆ ಅವರು ಹೋಮಗಳನ್ನೂ ಯಜ್ಞಗಳನ್ನೂ ಅರ್ಪಿಸುವಾಗ ಹಾಡುತ್ತಾ ಸಂತೋಷದಿಂದ ತಮ್ಮ ಕೆಲಸವನ್ನು ಮಾಡಿದರು.
ನಿಮ್ಮ ನಿಮ್ಮ ವಂಶಕ್ರಮದ ಮೇರೆಗೆ ದೇವಾಲಯದೊಳಗೆ ಸೇವೆಮಾಡಲು ನಿಮ್ಮನ್ನು ಸಿದ್ಧಮಾಡಿಕೊಳ್ಳಿರಿ. ಅರಸನಾದ ದಾವೀದನೂ ಅವನ ಮಗನಾದ ಸೊಲೊಮೋನನೂ ನಿಮಗೆ ಕೊಟ್ಟ ಸೇವಾ ಜವಾಬ್ದಾರಿಕೆಗಳನ್ನು ನಡಿಸಿರಿ.