ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.
ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.