15 ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ.
ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳುಹಿಸುತ್ತಾ ಬಂದೆ. “ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ, ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ವಾಸಿಸುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ.” ಆದರೆ ನೀವು ಕೇಳಲಿಲ್ಲ. ಕಿವಿಗೊಡಲೂ ಇಲ್ಲ.
“ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ, ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ಮೋಶೆಯ ಎಲ್ಲಾ ನಿಯಮದ ಪ್ರಕಾರ ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳಿರಿ,” ಎಂದು ಯೆಹೋವ ದೇವರು ಸಮಸ್ತ ಪ್ರವಾದಿಗಳ ಮುಖಾಂತರವಾಗಿಯೂ, ಸಮಸ್ತ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ, ಯೆಹೂದಕ್ಕೂ ಎಚ್ಚರಿಕೆ ಕೊಟ್ಟಿದ್ದರು.
ಆದರೆ ಯೆಹೋವ ದೇವರು ಅಬ್ರಹಾಮನ, ಇಸಾಕನ, ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಇಸ್ರಾಯೇಲರಿಗೆ ಕೃಪೆತೋರಿಸಿ ಅವರ ಮೇಲೆ ಅನುಕಂಪಗೊಂಡರು. ಅವರನ್ನು ನಾಶಮಾಡಲು, ಆತನು ಅವರನ್ನು ತನ್ನಿಂದ ತೊರೆದುಬಿಡಲು ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲು ಮನಸ್ಸು ಮಾಡಲಿಲ್ಲ.
“ಎಫ್ರಾಯೀಮೇ, ನಿನ್ನನ್ನು ಹೇಗೆ ಬಿಟ್ಟುಬಿಡಲಿ? ಇಸ್ರಾಯೇಲೇ, ನಿನ್ನನ್ನು ಹೇಗೆ ಕೈಬಿಡಲಿ? ಅದ್ಮದ ಹಾಗೆ ನಿನ್ನನ್ನು ದುರ್ಗತಿಗೆ ಹೇಗೆ ಒಪ್ಪಿಸಲಿ? ಚೆಬೋಯಿಮನಂತೆ ನಿನ್ನನ್ನು ಹೇಗೆ ನಾಶಮಾಡಲಿ? ನನ್ನ ಹೃದಯವು ನನ್ನಲ್ಲಿ ಮಾರ್ಪಟ್ಟಿದೆ. ನನ್ನಲ್ಲಿ ಕರುಣೆ ಉಕ್ಕಿ ಬಂದಿದೆ.
ಆದ್ದರಿಂದ ನೋಡಿರಿ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ನಿಯಮ ಬೋಧಕರನ್ನೂ ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಏರಿಸುವಿರಿ. ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸುವಿರಿ.
ನಿಮ್ಮ ಪಿತೃಗಳು ಹಿಂಸೆಪಡಿಸದೆ ಇದ್ದ ಪ್ರವಾದಿ ಒಬ್ಬನಾದರೂ ಇರುವನೇ? ನೀತಿವಂತರಾಗಿರುವ ಒಬ್ಬರು ಬರಲಿದ್ದಾರೆಂದು ಮುಂತಿಳಿಸಿದವರನ್ನು ಸಹ ಅವರು ಕೊಂದುಹಾಕಿದರು. ಈಗ ನೀವೇ ಅವರನ್ನು ಹಿಡಿದುಕೊಟ್ಟು ಕೊಲೆಮಾಡಿದ್ದೀರಿ.
ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ, ಜನರೂ ಜನಾಂಗಗಳ ಅಸಹ್ಯಗಳನ್ನು ಹಿಂಬಾಲಿಸಿ ಬಹಳವಾಗಿ ಅಪನಂಬಿಗಸ್ತರಾಗಿ, ಯೆಹೋವ ದೇವರು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
ನೀವು ಅನೇಕ ವರ್ಷ ಅವರನ್ನು ತಾಳಿಕೊಂಡಿರಿ. ನಿಮ್ಮ ಪ್ರವಾದಿಗಳ ಮುಖಾಂತರ ನಿಮ್ಮ ಆತ್ಮನಿಂದ ಅವರನ್ನು ಎಚ್ಚರಿಸಿದಿರಿ. ಆದರೆ ಅವರು ಕಿವಿಗೊಡದೆ ಇದ್ದುದರಿಂದ ನೀವು ಅವರನ್ನು ಅನ್ಯದೇಶದವರ ಕೈಯಲ್ಲಿ ಒಪ್ಪಿಸಿದಿರಿ.
ಖಡ್ಗವನ್ನೇ ಗತಿಯಾಗ ಮಾಡುವೆನು. ಆದ್ದರಿಂದ ನಿಮ್ಮನ್ನು ಖಡ್ಗಕ್ಕೆ ನೇಮಿಸುವೆನು. ನೀವೆಲ್ಲರು ಕೊಲೆಗೆ ಬೊಗ್ಗಿಕೊಳ್ಳುವಿರಿ. ಏಕೆಂದರೆ, ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ. ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.”
ಏಕೆಂದರೆ ನಾನು ನಿಮ್ಮ ತಂದೆಗಳಿಗೆ, “ನನ್ನ ಮಾತನ್ನು ಕೇಳಿ,” ಎಂದು ಖಂಡಿತವಾಗಿ ಹೇಳಿದೆನು. ಅವರನ್ನು ಈಜಿಪ್ಟ್ ದೇಶದೊಳಗಿಂದ ಮೇಲೆ ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಜ್ಞಾಪಿಸುತ್ತಾ ಬಂದಿದ್ದೇನೆ.
ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡೆದುಕೊಂಡು, ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಅವುಗಳನ್ನು ಆರಾಧಿಸುವುದಕ್ಕೂ ಹಿಂಬಾಲಿಸುವ ಈ ದುಷ್ಟಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ನಾನು ಅವರಿಗೆ ಬೋಧಿಸಿದೆನು. ಪುನಃ ಬೋಧಿಸಿದೆನು. ಆದರೂ ಉಪದೇಶ ಹೊಂದುವುದಕ್ಕೆ ಅವರು ಕಿವಿಗೊಡಲಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ.
ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.”
ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ, ನಿಮ್ಮ ಕೆಟ್ಟ ಮಾರ್ಗಗಳನ್ನೂ, ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸರ್ವಶಕ್ತರಾದ ಯೆಹೋವ ದೇವರು ಪ್ರಕಟಿಸುತ್ತಾರೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ. ನನ್ನಲ್ಲಿ ಲಕ್ಷ್ಯವಿಡಲಿಲ್ಲ ಎಂದು ಯೆಹೋವ ದೇವರು ಹೇಳುತ್ತಾರೆ.