ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.
ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.
ನೆಬೂಕದ್ನೆಚ್ಚರನು ಮಾತನಾಡಿ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ದೂತನನ್ನು ಕಳುಹಿಸಿ, ತಮ್ಮ ಸೇವಕರನ್ನು ರಕ್ಷಿಸಿದ್ದಾರೆ. ಅವರು ದೇವರಲ್ಲಿ ನಂಬಿಕೆ ಇಟ್ಟರು. ಅರಸನ ಆಜ್ಞೆಯನ್ನು ಮೀರಿದರು. ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ, ಆರಾಧಿಸದೆ ಇರುವ ಹಾಗೆ ತಮ್ಮ ಪ್ರಾಣಗಳನ್ನು ಕೊಡಲೂ ಸಿದ್ಧರಾದರು.
ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು.