ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.
ಆಯಿ ಎಂಬ ಪಟ್ಟಣದ ಮನುಷ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳುವುದನ್ನು ಕಂಡರು. ಹೇಗಾದರೂ ಓಡಿಹೋಗಲು ಅವರಿಗೆ ತ್ರಾಣ ಇಲ್ಲದೆ ಹೋಯಿತು. ಆಗ ಮರುಭೂಮಿಗೆ ಓಡಿ ಹೋದ ಇಸ್ರಾಯೇಲರು ಹಿಂದಟ್ಟಿದವರ ಕಡೆಗೆ ತಿರುಗಿದರು.
ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆದರೆ ಯೆಹೋಷಾಫಾಟನು ಕೂಗಿಕೊಂಡನು. ಆಗ ಯೆಹೋವ ದೇವರು ಅವನಿಗೆ ಸಹಾಯಮಾಡಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.
ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರವಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ಜನರನ್ನು ಎಚ್ಚರಿಸುವಂತೆ ತುತೂರಿಗಳನ್ನು ಆರ್ಭಟವಾಗಿ ಊದಬೇಕು. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನೆನಪು ಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ಬಿಡಿಸುವನು.
ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.