ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
ಇದಲ್ಲದೆ ಅವನು ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನೂ ಹಿಡಿದ ಲೇವಿಯರನ್ನು ದಾವೀದನೂ, ಅರಸನ ದರ್ಶಿಯಾದ ಗಾದನೂ, ಪ್ರವಾದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ, ಯೆಹೋವ ದೇವರ ಆಲಯದಲ್ಲಿ ನಿಲ್ಲಿಸಿದನು. ಏಕೆಂದರೆ ಯೆಹೋವ ದೇವರ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹೀಗೆ ಇತ್ತು.
ಇದಲ್ಲದೆ ಯಾಜಕರ, ಲೇವಿಯರ ವರ್ಗಗಳಿಗೋಸ್ಕರವೂ, ಯೆಹೋವ ದೇವರ ಮನೆಯ ಸೇವೆಯ ಸಮಸ್ತ ಕೆಲಸಕ್ಕೋಸ್ಕರವೂ ಯೆಹೋವ ದೇವರ ಮನೆಯಲ್ಲಿರುವ ಸೇವೆ ಮಾಡುವ ಸಮಸ್ತ ಪಾತ್ರೆಗಳಿಗೋಸ್ಕರವೂ ಸೂಚನೆಗಳನ್ನು ಕೊಟ್ಟನು.
ಆಗ ಯೆಹೋಯಾದಾವನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವ ದೇವರ ಆಲಯದ ಪರಿಚಾರಕರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವ ದೇವರ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ಬೇರ್ಪಡಿಸಿದ್ದನು. ದಾವೀದನಿಂದ ನೇಮಕವಾದ ಪ್ರಕಾರ ಸಂತೋಷದಿಂದ ಹಾಡುತ್ತಾ ಮೋಶೆಯ ನಿಯಮದಲ್ಲಿ ಬರೆದಿರುವಂತೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುವುದು ಅವರ ಕರ್ತವ್ಯವಾಗಿತ್ತು.