ಆದರೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲ್ಲ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಡುವುದರಿಂದ ಮಾತ್ರ ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆಂದು ಬಲ್ಲೆವು. ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಸಲುವಾಗಿ ನಾವೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಬಿಟ್ಟು, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿದ್ದೇವೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲೆ ಯಾರೂ ದೇವರೊಡನೆ ಸತ್ಸಂಬಂಧಿಕರಾಗಿ ಕಂಡುಬರುವುದಿಲ್ಲ.
ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ.