ಆದರೂ ಕಷ್ಟಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.
ಇಸ್ರಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬವನು ಬಂದು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನೂ ಮತ್ತು ಗಿಲ್ಯಾದ್ ಹಾಗು ಗಲಿಲೇಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು, ಅವುಗಳ ನಿವಾಸಿಗಳನ್ನು ಅಸ್ಸೀರಿಯಾ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.