ಆಮೇಲೆ ಅಮಚ್ಯನು ಯೆಹೂದ್ಯರನ್ನು ಸಹಸ್ರಾಧಿಪತಿ ಹಾಗು ಶತಾಧಿಪತಿಗಳ ಕೈಕೆಳಗೆ ಒಟ್ಟುಗೂಡಿಸಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರನ್ನು ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷದವರು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರನ್ನು ಲೆಕ್ಕಮಾಡಿಸಿದನು. ಅವರಲ್ಲಿ ಬರ್ಜಿ, ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷಮಂದಿ ಸಿಕ್ಕಿದರು.
ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿ ಬರ್ಜಿಗಳನ್ನು ಹಿಡಿದ ಮೂರು ಲಕ್ಷ ಮಂದಿ ಯೆಹೂದ್ಯರಿದ್ದರು. ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆದ ಎರಡು ಲಕ್ಷದ ಎಂಬತ್ತು ಸಾವಿರ ಮಂದಿ ಬೆನ್ಯಾಮೀನ್ಯರೂ ಇದ್ದರು. ಇವರೆಲ್ಲರು ರಣವೀರರು.
ರೆಹಬ್ಬಾಮನು ಜೆರುಸಲೇಮನ್ನು ಮುಟ್ಟಿದ ನಂತರ ಇಸ್ರಯೇಲರಿಗೆ ವಿರುದ್ಧ ಯುದ್ಧಮಾಡುವುದಕ್ಕೂ ಅವರ ರಾಜ್ಯವನ್ನು ಮರಳಿ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಬತ್ತು ಸಾವಿರ ಮಂದಿ ಶ್ರೇಷ್ಟ ಸೈನಿಕರನ್ನು ಕೂಡಿಸಿದನು.
ಇವನು ಯೆಹೂದ್ಯರಿಗೆ, “ನಾವು ನಮ್ಮ ದೇವರಾದ ಸರ್ವೇಶ್ವರನನ್ನು ಆಶ್ರಯಿಸಿಕೊಂಡ ಕಾರಣ, ಅವರ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ, ನಾಡು ಈವರೆಗೆ ನಿರಾತಂಕವಾಗಿದೆ. ಆದುದರಿಂದ ನಾವು ಪಟ್ಟಣಗಳನ್ನು ಕಟ್ಟಿ ಅವುಗಳನ್ನು ಸುತ್ತಣ ಗೋಡೆ, ಬುರುಜು, ಬಾಗಿಲು, ಅಗುಳಿ ಇವುಗಳಿಂದ ಭದ್ರಪಡಿಸೋಣ,” ಎಂದನು. ಅವರು ಅವುಗಳನ್ನು ಚೆನ್ನಾಗಿ ಕಟ್ಟಿ ಮುಗಿಸಿದರು.