2 ಅರಸುಗಳು 15:29 - ಕನ್ನಡ ಸತ್ಯವೇದವು C.L. Bible (BSI)
29 ಇಸ್ರಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬವನು ಬಂದು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನೂ ಮತ್ತು ಗಿಲ್ಯಾದ್ ಹಾಗು ಗಲಿಲೇಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು, ಅವುಗಳ ನಿವಾಸಿಗಳನ್ನು ಅಸ್ಸೀರಿಯಾ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.
29 ಇಸ್ರಾಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬುವವನು ಬಂದು ಇಯ್ಯೋನ್, ಆಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನು ಗಿಲ್ಯಾದ್ ಮತ್ತು ಗಲಿಲಾಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು ಅವುಗಳ ನಿವಾಸಿಗಳನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.
29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.
29 ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು.
ಆದುದರಿಂದ ಅಸ್ಸೀರಿಯದ ರಾಜಪೂಲ್ (ಇವನಿಗೆ ತಿಲ್ಗತ್ಪಿಲೆಸರ್ ಎಂಬ ಹೆಸರೂ ಇದೆ) ಅವರ ಮೇಲೆ ದಾಳಿಮಾಡುವಂತೆ ಇಸ್ರಯೇಲ್ ದೇವರು ಪ್ರೇರಿಸಿದರು. ಅವನು ರೂಬೇನ್, ಗಾದ್ ಮತ್ತು ಪೂರ್ವದಲ್ಲಿಯ ಮನಸ್ಸೆ ಗೋತ್ರ ಗೋತ್ರಗಳವರನ್ನು ಗಡೀಪಾರು ಮಾಡಿ ಅವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಒಯ್ದನು. ಅವರು ಅಲ್ಲಿಯೇ ನೆಲೆಸುವಂತೆ ಮಾಡಿದನು.
ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು.
ಆಹಾಜನು ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪೆಲೆಸರನ ಬಳಿಗೆ ದೂತರನ್ನು ಕಳುಹಿಸಿ, “ನಾನು ನಿಮ್ಮ ಸೇವಕ ಹಾಗು ಕುವರ; ನೀವು ಬಂದು ನನ್ನನ್ನು, ನನಗೆ ವಿರುದ್ಧ ದಂಡೆತ್ತಿ ಬಂದಿರುವ ಸಿರಿಯಾದವರ ಮತ್ತು ಇಸ್ರಯೇಲರ ಅರಸುಗಳ ಕೈಗೆ ಸಿಕ್ಕದಂತೆ, ಕಾಪಾಡಿ,” ಎಂದು ಹೇಳಿಸಿದನು.
ಬೆನ್ಹದದನು ಅರಸ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು.
ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಇಸ್ರಯೇಲರ ಪಟ್ಟಣಗಳಿಗೆ ವಿರುದ್ಧ ಕಳುಹಿಸಿದನು; ಅವರು ಇಯ್ಯೋನ್, ದಾನ್, ಆಬೇಲ್ಮಯಿಮ್ ಇವುಗಳನ್ನೂ ನಫ್ತಾಲ್ಯರ ಪಟ್ಟಣಗಳ ಎಲ್ಲ ಉಗ್ರಾಣಗಳನ್ನೂ ಹಾಳುಮಾಡಿದರು.
ಈ ಕಾರಣ ಸರ್ವೇಶ್ವರ ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ವಶಪಡಿಸಿದರು. ಮ್ಲೇಚ್ಛರ ಹರೋಷೆತ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಪತಿ ಆಗಿದ್ದನು.
ಸರ್ವೇಶ್ವರ ಇಂತೆನ್ನುತ್ತಾರೆ: “ಅಮ್ಮೋನ್ಯರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ನಾಡಿನ (ಗಡಿ) ವಿಸ್ತರಣೆಗಾಗಿ ಗರ್ಭಿಣಿಯರ ಹೊಟ್ಟೆಯನ್ನೇ ತಿವಿದು ಸೀಳಿಬಿಟ್ಟಿದ್ದಾರೆ.
ಸರ್ವೇಶ್ವರ ಇಂತೆನ್ನುತ್ತಾರೆ: ದಮಸ್ಕದ ಜನರು ಪದೇಪದೇ ಮಾಡಿರುವ ದ್ರೋಹಗಳಿಗಾಗಿ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.
ನಿಮ್ಮ ನಾಡು ಹಾಳುಬಿದ್ದಿದೆ: ನಿಮ್ಮ ಪಟ್ಟಣಗಳು ಸುಟ್ಟು ಭಸ್ಮವಾಗಿವೆ. ನಿಮ್ಮ ಕಣ್ಮುಂದೆಯೆ ನಿಮ್ಮ ಭೂಮಿಯನ್ನು ಅನ್ಯಜನರು ಕಬಳಿಸುತ್ತಿದ್ದಾರೆ. ಅನ್ಯದೇಶಗಳು ನಾಶವಾದಂತೆಯೇ ನಿಮ್ಮ ನಾಡು ಹಾಳಾಗಿದೆ.
ಸರ್ವೇಶ್ವರ, ತಮ್ಮ ದಾಸರಾದ ಎಲ್ಲಾ ಪ್ರವಾದಿಗಳ ಮುಖಾಂತರ ಭವಿಷ್ಯ ನುಡಿದಂತೆ, ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. ಅವರು ಸೆರೆಯವರಾಗಿ ತಮ್ಮ ನಾಡಿನಿಂದ ಅಸ್ಸೀರಿಯಾ ದೇಶಕ್ಕೆ ಒಯ್ಯಲ್ಪಟ್ಟು ಇಂದಿನವರೆಗೂ ಅಲ್ಲೇ ಇರುತ್ತಾರೆ.
ಶತ್ರುಗಳಿಂದ ನೀವುಪರಾಜಯವನ್ನು ಹೊಂದುವಂತೆ ಸರ್ವೇಶ್ವರ ಮಾಡುವರು; ನೀವು ಒಂದೇ ದಾರಿಯಿಂದ ಅವರ ಮೇಲೆ ದಾಳಿಮಾಡಲು ಹೋಗಿ ಏಳು ದಾರಿ ಹಿಡಿದು ಓಡಿಹೋಗುವಿರಿ. ಜಗದ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವುವು.
ಸರ್ವೇಶ್ವರ ಇಸ್ರಯೇಲರನ್ನು ಹೊಡೆಯುವರು. ಆಗ ಅವರು ನೀರಿನಲ್ಲಿರುವ ಆಪು ಹುಲ್ಲೋ ಎಂಬಂತೆ ಹೊಯ್ದಾಡುವರು. ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದ ಅವರನ್ನು, ಅವರ ಪಿತೃಗಳಿಗೆ ಕೊಟ್ಟ ನಾಡಿನಿಂದ ಬೇರುಸಹಿತ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದಲ್ಲೆಲ್ಲಾ ಚದರಿಸಿಬಿಡುವರು.
ಅಸ್ಸೀರಿಯಾ ದೇಶದ ಅರಸನಾದ ಪೂಲನೆಂಬವನು ಇಸ್ರಯೇಲ್ ದೇಶಕ್ಕೆ ವಿರುದ್ಧ ದಾಳಿಯಿಟ್ಟಾಗ, ಮೆನಹೇಮನು ಅವನ ಮುಖಾಂತರ ತನ್ನ ಅರಸುತನವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ, ಅವನಿಗೆ ಮೂವತ್ತನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು.
ಆಗ ಏಲನ ಮಗ ಹೋಶೇಯನು, ರೆಮಲ್ಯನ ಮಗ ಪೆಕಹನಿಗೆ ವಿರುದ್ಧ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು, ಇವನ ಸ್ಥಾನದಲ್ಲಿ ತಾನೇ ಅರಸನಾದನು.
ಅರಸ ಆಹಾಜನು ಅಸ್ಸೀರಿಯದ ಅರಸ ತಿಗ್ಲತ್ಪಿಲೆಸರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು; ಅಲ್ಲಿದ್ದ ಬಲಿಪೀಠವನ್ನು ಕಂಡು ಅದರ ಒಂದು ಚಿತ್ರವನ್ನೂ ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ ಯಾಜಕ ಊರೀಯನಿಗೆ ಕಳುಹಿಸಿದನು.
ಓ ನಮ್ಮ ದೇವರೇ, ನೀವು ಮಹೋನ್ನತರು, ಶಕ್ತಿಸಾಮರ್ಥ್ಯರು, ಭಯಭಕ್ತಿಗೆ ಪಾತ್ರರು, ಕೃಪಾವಾಗ್ದಾನಗಳ ನೆರವೇರಿಸುವವರು. ಅಲ್ಪವೆಂದೆಣಿಸಬೇಡಿ - ನಮ್ಮ ರಾಜರು, ರಾಜ್ಯಪಾಲರು. ಯಾಜಕರು, ಪ್ರವಾದಿಗಳು, ಹಿರಿಯರು, ಪ್ರಜೆಗಳು ಸಹಿಸಬೇಕಾಗಿಬಂದಿರುವ ಈ ಕಷ್ಟಕಾರ್ಪಣ್ಯಗಳನು.
ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಯೇಲರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ ಗೇರ್ಷೋಮನ ಮಗನೂ ಆದ ಯೆಹೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು.
ಅಸ್ಸೀರಿಯದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡನು. ಆ ಹಣ ಸಿಕ್ಕಿದ ನಂತರ ಅಸ್ಸೀರಿಯದ ಅರಸನು ಅಲ್ಲಿ ನಿಲ್ಲದೆ ಹಿಂದಿರುಗಿ ಹೋದನು.