6 ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು “ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು,” ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ.
6 ಸಹೋದರರೇ, ನಾನು ನಿಮಗೋಸ್ಕರವೇ ಹಿಂದಣ ಮಾತುಗಳನ್ನು ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. ನೀವು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿ ಹೋಗಬಾರದೆಂಬದನ್ನೂ ನಿಮ್ಮಲ್ಲಿ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂಬದನ್ನೂ ಕಲಿತುಕೊಳ್ಳಬೇಕು.
6 ಸಹೋದರ ಸಹೋದರಿಯರೇ, ನಾನು ನಿಮಗೋಸ್ಕರ ಈ ವಿಷಯಗಳಲ್ಲಿ ಅಪೊಲ್ಲೋಸನನ್ನು ಮತ್ತು ನನ್ನನ್ನು ಉದಾಹರಿಸಿದ್ದೇನೆ. ಏಕೆಂದರೆ, “ಬರೆಯಲ್ಪಟ್ಟಿರುವ ನಿಯಮಗಳನ್ನು ಮಾತ್ರ ಅನುಸರಿಸು” ಎಂಬ ವಾಕ್ಯದ ಅರ್ಥವನ್ನು ನೀವು ನಮ್ಮಿಂದ ಕಲಿತುಕೊಳ್ಳಬೇಕು. ಆಗ ನೀವು ಒಬ್ಬನ ವಿಷಯದಲ್ಲಿ ಹೆಚ್ಚಳಪಟ್ಟು ಮತ್ತೊಬ್ಬನನ್ನು ದ್ವೇಷಿಸುವುದಿಲ್ಲ.
6 ಪ್ರಿಯರೇ, ನಾನು ನಿಮ್ಮ ಪ್ರಯೋಜನಕ್ಕಾಗಿ ಇವುಗಳನ್ನು ದೃಷ್ಟಾಂತರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. “ನೀವು ಬರೆದಿರುವುದಕ್ಕೆ ಮೀರಿ ಹೋಗಬಾರದು,” ಎಂಬ ಹೇಳಿಕೆಯ ಅರ್ಥವನ್ನು ನಮ್ಮಿಂದ ಕಲಿತುಕೊಳ್ಳಬಹುದು. ಆಗ ನಿಮ್ಮಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುವುದರ ವಿರೋಧವಾಗಿ ಹೆಮ್ಮೆ ಪಡುವುದಿಲ್ಲ.
ಏಕೆಂದರೆ, ಯಾರಾದರೂ ಬಂದು, ನಾವು ಬೋಧಿಸದೆ ಇರುವ ಬೇರೊಬ್ಬ ಯೇಸುವನ್ನು ಬೋಧಿಸಿದರೆ ನೀವು ಸ್ವೀಕರಿಸುತ್ತೀರಿ. ನೀವು ಹೊಂದಿರುವ ಪವಿತ್ರಾತ್ಮರಿಗೆ ಬದಲಾಗಿ ಬೇರೊಬ್ಬ ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನಿಮಗೆ ಈಗಾಗಲೇ ದೊರಕಿರುವ ಶುಭಸಂದೇಶವಲ್ಲದೆ ಬೇರೊಂದು ಸಂದೇಶವನ್ನು ನಿಮಗೆ ಸಾರಿದರೆ, ನೀವು ಒಮ್ಮೆಗೇ ಒಪ್ಪಿಕೊಳ್ಳುತ್ತೀರಿ. ಇದು ನಿಜಕ್ಕೂ ಆಶ್ಚರ್ಯವೇ ಸರಿ.
ನಾವು ತಪ್ಪಿತಸ್ಥರಲ್ಲವೆಂದು ನಿಮ್ಮ ಮುಂದೆ ಸಮರ್ಥಿಸಿಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇವೆಂದು ನೆನಸಬೇಡಿ. ದೇವರ ಸನ್ನಿಧಿಯಲ್ಲಿ, ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಹೇಳುತ್ತೇನೆ: ಪ್ರಿಯ ಸಹೋದರರೇ, ನಾವು ಮಾಡುತ್ತಿರುವುದೆಲ್ಲ ನಿಮ್ಮ ಆಧ್ಯಾತ್ಮಿಕ ಅಭಿವೃದ್ಧಿಗಾಗಿಯೇ.
ಹಾಗೇನಾದರೂ ನಾನು ಹೊಗಳಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು.
ನಮ್ಮ ಶುಭಸಂದೇಶ ಕೇವಲ ಬಾಯಿಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ.
ದೇವರು ನನಗೆ ದಯಪಾಲಿಸಿರುವ ಸೇವೆಯ ನಿಮಿತ್ತ ನಾನು ನಿಮಗೆ ಹೇಳುವ ಬುದ್ಧಿಮಾತಿದು: ನಿಮ್ಮಲ್ಲಿ ಯಾರೂ ತನ್ನನ್ನೇ ಅತಿಯಾಗಿ ಭಾವಿಸಿಕೊಳ್ಳದಿರಲಿ. ದೇವರು ತನಗೆ ಇತ್ತಿರುವ ವಿಶ್ವಾಸದ ಪರಿಮಾಣದ ಮೇರೆಗೆ ಪ್ರತಿಯೊಬ್ಬನೂ ತನ್ನ ಬಗ್ಗೆ ಸರಿಯಾದ ಅಭಿಪ್ರಾಯ ಹೊಂದಿರಲಿ.
ನೀವು ಹೊರಗಿನ ತೋರಿಕೆಗಳನ್ನು ಗಮನಿಸುವಂತವರು. ಯಾರಾದರೂ ತಾನು ಕ್ರಿಸ್ತಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ಅವನು ಮತ್ತೆ ತನ್ನನ್ನೇ ಪರೀಕ್ಷಿಸಿ ನೋಡಲಿ. ಏಕೆಂದರೆ, ಅವನಂತೆಯೇ ನಾವೂ ಕ್ರಿಸ್ತಯೇಸುವಿಗೆ ಸೇರಿದವರು.
ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ಎಂದು ಹೇಳಿಕೊಳ್ಳುತ್ತೀರಿ. ಜ್ಞಾನವು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ. ಪ್ರೀತಿಯಾದರೋ ಭಕ್ತಿಯನ್ನು ವೃದ್ಧಿಗೊಳಿಸುತ್ತದೆ.
ಕೆಲವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಅವರಂತೆ ಕೊಚ್ಚಿಕೊಳ್ಳುವುದಕ್ಕೂ ಅವರೊಡನೆ ಹೋಲಿಸಿಕೊಳ್ಳುವುದಕ್ಕೂ ನಾವು ಯತ್ನಿಸುವುದಿಲ್ಲ. ಅವರಿಗೆ ತಾವು ಹಾಕಿಕೊಂಡದ್ದೇ ಅಳತೆಗೋಲು. ತಮಗೆ ತಾವೇ ತಾಳೆಹಾಕಿಕೊಳ್ಳುವಂಥ ಅವಿವೇಕಿಗಳು.
ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ.
ನಾನು ನಿಮ್ಮಲ್ಲಿ ಬಂದಾಗ ಒಂದು ವೇಳೆ ನೀವು ನನ್ನ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲವೇನೋ ಮತ್ತು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಕಾಣಿಸುವುದಿಲ್ಲವೇನೋ ಎಂಬ ಶಂಕೆ ನನಗಿದೆ. ನಿಮ್ಮಲ್ಲಿ ಜಗಳ, ದ್ವೇಷ, ಅಸೂಯೆ, ಸ್ವಾರ್ಥ, ಚಾಡಿಮಾತು, ಹರಟೆ, ಅಹಂಕಾರ, ಅನೀತಿ - ಇವುಗಳು ಇರಬಹುದೇನೋ ಎಂಬ ದಿಗಿಲೂ ನನಗಿದೆ.