ಧಾನ್ಯ, ದ್ರಾಕ್ಷಿ, ಎಣ್ಣೆ ಇವುಗಳಲ್ಲಿ ದಶಮಭಾಗವನ್ನೂ ದನಕುರಿಗಳ ಚೊಚ್ಚಲು ಮರಿಗಳನ್ನೂ ಮತ್ತು ನಿಮ್ಮ ಹಿಂಡುಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ತನ್ನ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ತಿನ್ನಬೇಕು. ಹೀಗೆ ನಿಮ್ಮ ದೇವರಾದ ಯೆಹೋವನಲ್ಲೇ ಯಾವಾಗಲೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವವರಾಗಿರಬೇಕು.
ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ ಸರ್ವಾಂಗಹೋಮಗಳೇ ಮುಂತಾದ ಯಜ್ಞಪಶುಗಳನ್ನೂ, ಬೆಳೆಯ ದಶಮಾಂಶಗಳನ್ನೂ, ಯೆಹೋವನಿಗೋಸ್ಕರ ಪ್ರತ್ಯೇಕಿಸುವ ಪದಾರ್ಥಗಳನ್ನೂ, ಹರಕೆಮಾಡಿದ ವಿಶೇಷವಾದ ಕಾಣಿಕೆಗಳನ್ನೂ ಇವುಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.
ನಿಮ್ಮ ಕುಲಗಳಲ್ಲಿ ಯಾವುದೋ ಒಂದು ಕುಲದಲ್ಲಿ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲೇ ನಿಮ್ಮ ಸರ್ವಾಂಗಹೋಮಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸಿದ ಎಲ್ಲಾ ಆಚಾರಗಳನ್ನು ನಡೆಸಬೇಕು.