ಇಸ್ರಾಯೇಲರ ದೇವರಾದ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೂ ಆಗುವುದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವುದು; ಆ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ, ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು; ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು. ಅಳಿದುಳಿದ ನನ್ನ ಜನರಿಗೆ ಅವು ಸ್ವಾಸ್ತ್ಯವಾಗುವವು.”
ಯೆರಿಕೋವಿನ ಜನರು ಎಲೀಷನಿಗೆ, “ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ, ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೆಯದಾಗಿದೆ. ಆದರೆ ನೀರು ಕೆಟ್ಟದ್ದಾಗಿರುವುದರಿಂದ ಬಂಜೆತನ ಉಂಟಾಗಿದೆ” ಎಂದು ಹೇಳಿದರು.
ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪು ಹಾಕಿ, “ಇನ್ನು ಮುಂದೆ ಈ ನೀರಿನಿಂದ ಮರಣವೂ ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.