ಇದಲ್ಲದೆ, ತನ್ನ ತಂದೆಯಾದ ದಾವೀದನ ಆಜ್ಞೆಗೆ ಅನುಸಾರವಾಗಿ ಯಾಜಕ ವರ್ಗಗಳನ್ನೂ, ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವರನ್ನು ಸ್ತುತಿಸಲು, ಯಾಜಕರ ಕೈಕೆಳಗೆ ಸೇವೆಮಾಡುತ್ತಲೂ ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯುತ್ತಲೂ ಇರಬೇಕಾಗಿತ್ತು. ದೇವರ ಮನುಷ್ಯನಾದ ದಾವೀದ ರಾಜನ ಅಪ್ಪಣೆ ಇದೇ ಆಗಿತ್ತು.
ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕೋಸ್ಕರ ಲೇವಿಯರನ್ನು, ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ನಿಲ್ಲಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು.
ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ, ಸರ್ವಾಂಗಹೋಮ, ಸಮಾಧಾನ ಯಜ್ಞ, ಇವುಗಳನ್ನು ಸಮರ್ಪಿಸುವುದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ, ಕೀರ್ತಿಸುತ್ತಾ, ಕೃತಜ್ಞತಾಸ್ತುತಿಮಾಡುತ್ತಾ ಇರುವುದಕ್ಕೂ ನೇಮಿಸಿದನು.