ಹೋಶೇಯ 6 - ಪರಿಶುದ್ದ ಬೈಬಲ್ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ 1 “ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ. ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು. ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು. 2 ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು. ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು. ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು. 3 ಯೆಹೋವನ ವಿಷಯವಾಗಿ ನಾವು ಕಲಿಯೋಣ. ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ. ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ. ವಸಂತಕಾಲದ ಮಳೆಯಂತೆ ಯೆಹೋವನು ಬರುವನು.” ಜನರು ನಿಷ್ಠಾವಂತರಲ್ಲ 4 “ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ? ಯೆಹೂದವೇ, ನಿನಗೆ ನಾನು ಏನು ಮಾಡಬೇಕು? ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ. ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ. ಅದು ಬೇಗನೆ ಇಲ್ಲದೆಹೋಗುವದು. 5 ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು. ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು. 6 ಯಾಕೆಂದರೆ ನನಗೆ ವಿಧೇಯತೆಯಿಂದ ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ. ಜನರು ತರುವ ಸರ್ವಾಂಗಹೋಮಗಳಿಗಿಂತಲೂ ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ. 7 ಆದರೆ ಜನರು ಆದಾಮನಂತೆ ಒಡಂಬಡಿಕೆಯನ್ನು ಮುರಿದುಹಾಕಿದರು. ಅವರ ದೇಶದಲ್ಲಿ ಅವರು ನನಗೆ ದ್ರೋಹಿಗಳಾದರು. 8 ಗಿಲ್ಯಾದು ಕೆಟ್ಟತನವನ್ನು ನಡಿಸುವ ಜನರಿಂದ ಕೂಡಿದ ನಗರವಾಗಿದೆ. ಜನರು ಇತರರನ್ನು ಮೋಸಗೊಳಿಸಿ ಕೊಲೆಮಾಡಿರುತ್ತಾರೆ. 9 ಕಳ್ಳರು ದಾರಿಯಲ್ಲಿ ಹೊಂಚುಹಾಕುತ್ತಾ ಜನರನ್ನು ಸೂರೆಮಾಡಲು ಕಾಯುತ್ತಿರುತ್ತಾರೆ. ಅದೇ ರೀತಿಯಲ್ಲಿ ಶೆಕೆಮಿಗೆ ಹೋಗುವ ದಾರಿಯಲ್ಲಿ ಯಾಜಕರು ಕಾಯುತ್ತಾ ಹಾದುಹೋಗುತ್ತಿರುವ ಜನರ ಮೇಲೆ ಬೀಳುವರು. ಅವರು ದುಷ್ಕೃತ್ಯಗಳನ್ನು ಮಾಡಿರುತ್ತಾರೆ. 10 ಇಸ್ರೇಲ್ ಜನಾಂಗದಲ್ಲಿ ಅತೀ ಭಯಂಕರ ಸಂಗತಿಗಳನ್ನು ನಾನು ನೋಡಿರುತ್ತೇನೆ. ಎಫ್ರಾಯೀಮು ದೇವರಿಗೆ ದ್ರೋಹಿಯಾದನು. ಇಸ್ರೇಲು ಪಾಪದಿಂದ ಹೊಲಸಾಗಿದೆ. 11 ಯೆಹೂದವೇ, ನಿನಗೆ ಸುಗ್ಗೀಕಾಲವು ನೇಮಕವಾಗಿದೆ, ಸೆರೆವಾಸದಿಂದ ನನ್ನ ಜನರನ್ನು ನಾನು ಹಿಂತಿರುಗಿ ಕರೆತಂದಾಗ ಅದು ಸಂಭವಿಸುವದು. |
Kannada Holy Bible: Easy-to-Read Version
All rights reserved.
© 1997 Bible League International
Bible League International