ಹೋಶೇಯ 3 - ಪರಿಶುದ್ದ ಬೈಬಲ್ಗುಲಾಮಳಾಗಿದ್ದ ಗೋಮೆರಳನ್ನು ಹೋಶೇಯನು ಕ್ರಯಕೊಟ್ಟು ಹಿಂದಕ್ಕೆ ಪಡಕೊಂಡದ್ದು 1 ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.” 2 ನಾನು ಹದಿನೈದು ತುಂಡು ಬೆಳ್ಳಿಯನ್ನೂ ಒಂಭತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಆಕೆಯನ್ನು ಕೊಂಡುಕೊಂಡೆನು. 3 ಬಳಿಕ ನಾನು ಆಕೆಗೆ, “ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು” ಎಂದು ಹೇಳಿದೆನು. 4 ಅದೇ ರೀತಿಯಲ್ಲಿ, ಇಸ್ರೇಲಿನ ಜನರು ಬಹಳ ದಿವಸಗಳ ತನಕ ಅರಸನಾಗಲಿ ಅಧಿಪತಿಯಾಗಲಿ ಇಲ್ಲದೆ ಇರುವರು. ಅವರು ಯಜ್ಞವಿಲ್ಲದೆ ಇರುವರು, ಸ್ಮಾರಕಸ್ತಂಭಗಳೂ ಇರುವದಿಲ್ಲ. ಅವರಲ್ಲಿ ಏಫೋದ್ ಇರುವದಿಲ್ಲ; ಅಲ್ಲದೆ ಮನೆದೇವತೆಯೂ ಇರುವದಿಲ್ಲ. 5 ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು. |
Kannada Holy Bible: Easy-to-Read Version
All rights reserved.
© 1997 Bible League International
Bible League International