Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 31 - ಪರಿಶುದ್ದ ಬೈಬಲ್‌


ಬೆಚಲೇಲ್ ಮತ್ತು ಒಹೊಲೀಯಾಬ

1 ತರುವಾಯ ಯೆಹೋವನು ಮೋಶೆಗೆ ಹೀಗೆಂದನು:

2 “ನಾನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದೇನೆ. ಊರಿಯು ಹೂರನ ಮಗನು.

3 ನಾನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿದ್ದೇನೆ. ನಾನು ಅವನಿಗೆ ಎಲ್ಲಾ ಬಗೆಯ ಕೆಲಸಗಳನ್ನು ಮಾಡಲು ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದೇನೆ.

4 ಬೆಚಲೇಲನು ಬಹಳ ಉತ್ತಮ ಚಿತ್ರಕಾರನಾಗಿದ್ದಾನೆ. ಬೆಳ್ಳಿಬಂಗಾರಗಳ ಮತ್ತು ತಾಮ್ರದ ವಸ್ತುಗಳನ್ನು ಅವನು ಮಾಡಬಲ್ಲನು.

5 ಅವನು ರತ್ನಗಳನ್ನು ಕೆತ್ತಿ ಅಂದವಾದ ಆಭರಣಗಳನ್ನು ಮಾಡಬಲ್ಲನು ಮತ್ತು ಮರಗೆಲಸವನ್ನು ಮಾಡಬಲ್ಲನು. ಅವನು ಎಲ್ಲಾ ತರದ ಕೆಲಸಗಳನ್ನು ಮಾಡಬಲ್ಲನು.

6 ಅವನೊಂದಿಗೆ ಕೆಲಸ ಮಾಡಲು ನಾನು ಒಹೊಲೀಯಾಬನನ್ನು ಆರಿಸಿಕೊಂಡಿದ್ದೇನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಬೇರೆ ಕೆಲಸಗಾರರಿಗೆಲ್ಲಾ ನಿಪುಣತೆಯನ್ನು ಅನುಗ್ರಹಿಸಿದ್ದೇನೆ:

7 ದೇವದರ್ಶನಗುಡಾರ, ಒಡಂಬಡಿಕೆ ಪೆಟ್ಟಿಗೆ, ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,

8 ಮೇಜು ಮತ್ತು ಅದರ ಮೇಲಿನ ವಸ್ತುಗಳು, ಬಂಗಾರದ ದೀಪಸ್ತಂಭ ಮತ್ತು ಅದರ ಉಪಕರಣಗಳು,

9 ಧೂಪವೇದಿಕೆ, ಯಜ್ಞವೇದಿಕೆ ಮತ್ತು ಅವುಗಳ ಉಪಕರಣಗಳು, ಗಂಗಾಳ ಮತ್ತು ಅದರ ಪೀಠ.

10 ಮಹಾಯಾಜಕನಾದ ಆರೋನನ ಎಲ್ಲಾ ವಿಶೇಷ ಬಟ್ಟೆಗಳು, ಆರೋನನ ಪುತ್ರರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಎಲ್ಲಾ ಬಟ್ಟೆಗಳು.

11 ಸುವಾಸನೆಯುಳ್ಳ ಅಭಿಷೇಕತೈಲ, ಪವಿತ್ರ ಸ್ಥಳದಲ್ಲಿ ಉಪಯೋಗಿಸುವ ಸುವಾಸನೆಯುಳ್ಳ ಧೂಪ. ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲೇ ಈ ಕೆಲಸಗಾರರು ಈ ವಸ್ತುಗಳನ್ನೆಲ್ಲಾ ಮಾಡತಕ್ಕದ್ದು.”


ಸಬ್ಬತ್

12 ತರುವಾಯ ಯೆಹೋವನು ಮೋಶೆಗೆ ಹೀಗೆಂದನು:

13 “ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.

14 “‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು.

15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು.

16 ಇಸ್ರೇಲರು ಸಬ್ಬತ್ ದಿನವನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಡಿಕೆ.

17 ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.

18 ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು