Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 26 - ಪರಿಶುದ್ದ ಬೈಬಲ್‌


ಬಿಲ್ದದನಿಗೆ ಯೋಬನ ಉತ್ತರ

1 ಆಗ ಯೋಬನು ಹೀಗೆ ಉತ್ತರಕೊಟ್ಟನು:

2 “ನಿನ್ನಿಂದ ಬಲಹೀನನಿಗೆ ಎಷ್ಟೋ ಸಹಾಯವಾಯಿತು! ನೀನು ನನ್ನ ಬಲಹೀನವಾದ ತೋಳುಗಳನ್ನು ಮತ್ತೆ ಬಲಗೊಳಿಸಿದೆ!

3 ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ! ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ.

4 ಇವುಗಳನ್ನು ತಿಳಿಸಲು ನಿನಗೆ ಯಾರು ಸಹಾಯ ಮಾಡಿದವರು? ಯಾರ ಆತ್ಮವು ನಿನ್ನನ್ನು ಪ್ರೇರೇಪಿಸಿತು?

5 “ಸತ್ತವರ ಆತ್ಮಗಳು ಭೂಗರ್ಭದಲ್ಲಿರುವ ಜಲರಾಶಿಗಳಲ್ಲಿ ನಡುಗುತ್ತವೆ.

6 ದೇವರಿಗೆ ಪಾತಾಳವೂ ಸ್ಪಷ್ಟವಾಗಿ ಕಾಣುತ್ತದೆ; ಮರಣವು ಆತನಿಗೆ ಮರೆಯಾಗಿಲ್ಲ.

7 ದೇವರು ಶೂನ್ಯದ ಮೇಲೆ ಉತ್ತರದಿಕ್ಕಿನ ಆಕಾಶವನ್ನು ವಿಸ್ತರಿಸಿದನು. ಆತನು ಭೂಮಿಯನ್ನು ಯಾವ ಆಧಾರವೂ ಇಲ್ಲದೆ ತೂಗುಹಾಕಿದ್ದಾನೆ.

8 ದೇವರು ಮೋಡಗಳನ್ನು ನೀರಿನಿಂದ ತುಂಬಿಸುವನು. ಆದರೆ ಮೋಡಗಳು ನೀರಿನ ಭಾರದಿಂದ ಒಡೆದುಹೋಗದಂತೆ ನೋಡಿಕೊಳ್ಳುವನು.

9 ದೇವರು ತನ್ನ ಮೋಡಗಳನ್ನು ಹರಡಿ ಪೂರ್ಣಚಂದ್ರನನ್ನು ಮರೆಮಾಡುವನು.

10 ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.

11 ದೇವರು ಗದರಿಸುವಾಗ ಆಕಾಶಮಂಡಲದ ಸ್ತಂಭಗಳು ಭಯದಿಂದ ನಡುಗುತ್ತವೆ.

12 ದೇವರ ಶಕ್ತಿಯು ಸಮುದ್ರವನ್ನು ಪ್ರಶಾಂತಗೊಳಿಸುವುದು. ದೇವರ ಶಕ್ತಿಯು ರಹಬನ ಸಹಾಯಕರನ್ನು ನಾಶಮಾಡುವುದು.

13 ಆತನ ಉಸಿರು ಆಕಾಶಮಂಡಲವನ್ನು ಶುಭ್ರಗೊಳಿಸುವುದು. ಆತನ ಜ್ಞಾನವು ಓಡಿಹೋಗಲು ಪ್ರಯತ್ನಿಸಿದ ರಹಬನನ್ನು ನಾಶಮಾಡುವುದು.

14 ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ. ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು