ಯೆಹೆಜ್ಕೇಲನು 35 - ಪರಿಶುದ್ದ ಬೈಬಲ್ಎದೋಮ್ ವಿರುದ್ಧ ಸಂದೇಶ 1 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಸೇಯೀರ್ ಪರ್ವತದ ಕಡೆಗೆ ನೋಡು. ನನ್ನ ಪರವಾಗಿ ಅದಕ್ಕೆ ವಿರುದ್ಧವಾಗಿ ಮಾತನಾಡು. 3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಅದಕ್ಕೆ ಹೇಳು: “‘ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಿನ್ನನ್ನು ಶಿಕ್ಷಿಸುತ್ತೇನೆ. ನಾನು ನಿನ್ನನ್ನು ಬಂಜರು ಭೂಮಿಯನ್ನಾಗಿ ಮಾಡುವೆನು. 4 ನಾನು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡುವೆನು; ನೀನು ಬರಿದಾಗುವೆ. ನಾನು ಒಡೆಯನಾದ ಯೆಹೋವನೆಂದು ಆಗ ನೀನು ತಿಳಿಯುವೆ. 5 ಯಾಕೆಂದರೆ ನೀನು ಯಾವಾಗಲೂ ನನ್ನ ಜನಕ್ಕೆ ವಿರೋಧವಾಗಿರುವೆ. ನೀನು ಇಸ್ರೇಲರ ವಿರುದ್ಧವಾಗಿ ಕತ್ತಿಯನ್ನೆತ್ತಿರುವೆ. ಅವರು ಆಗ ಸಂಕಟದಲ್ಲಿದ್ದರು ಮತ್ತು ತಮ್ಮ ಶಿಕ್ಷೆಯ ಕಡೆಗಾಲದಲ್ಲಿದ್ದರು.’” 6 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ನಿಮ್ಮನ್ನು ಮರಣವು ನುಂಗಿಬಿಡುವಂತೆ ಮಾಡುವೆನು. ಮರಣವು ನಿಮ್ಮನ್ನು ಹಿಂಬಾಲಿಸುವುದು. ನೀನು ಜನರನ್ನು ಕೊಲ್ಲಲು ಹಿಂಜರಿಯಲಿಲ್ಲ. ಆದ್ದರಿಂದ ಮರಣವು ನಿನ್ನನ್ನು ಓಡಿಸುವುದು. 7 ನಾನು ಸೇಯೀರ್ ಬೆಟ್ಟವನ್ನು ಹಾಳುಮಾಡುವೆನು. ಆ ನಗರದಿಂದ ಬರುವ ಪ್ರತಿಯೊಬ್ಬನನ್ನು ಸಾಯಿಸುವೆನು. 8 ಅದರ ಬೆಟ್ಟಪ್ರಾಂತ್ಯಗಳನ್ನು ಸತ್ತ ಹೆಣಗಳಿಂದ ಮುಚ್ಚುವೆನು. ಹೆಣಗಳು ಎಲ್ಲಾ ಕಡೆಗಳಲ್ಲಿಯೂ ಬೆಟ್ಟಗುಡ್ಡಗಳಲ್ಲಿಯೂ ತಗ್ಗುಗಳಲ್ಲಿಯೂ ಇರುವವು. 9 ನೀನು ನಿತ್ಯಕಾಲಕ್ಕೂ ಬರಿದಾಗಿರು. ಯಾರೂ ನಿನ್ನ ಪಟ್ಟಣಗಳಲ್ಲಿ ವಾಸಿಸರು. ಆಗ ನೀನು, ದೇವರಾದ ಯೆಹೋವನು ನಾನೇ ಎಂದು ತಿಳಿದುಕೊಳ್ಳುತ್ತಿ.” 10 “ಈ ಎರಡು ದೇಶಗಳು (ಇಸ್ರೇಲ್ ಮತ್ತು ಯೆಹೂದ) ನನ್ನವು. ಅವುಗಳನ್ನು ಸ್ವಂತಕ್ಕಾಗಿ ತೆಗೆದುಕೊಳ್ಳೋಣ” ಎಂದು ಹೇಳಿರುತ್ತೀ. ಆದಾಗ್ಯೂ ಯೆಹೋವನು ಅಲ್ಲಿದ್ದನು. 11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜನರ ಮೇಲೆ ನೀನು ಅಸೂಯೆಪಟ್ಟೆ ಮತ್ತು ನೀನು ಅವರ ಮೇಲೆ ಸಿಟ್ಟುಗೊಂಡಿದ್ದೆ. ನಿಜವಾಗಿ ಹೇಳಬೇಕಾದರೆ, ನೀನು ಅವರನ್ನು ದ್ವೇಷಿಸಿದೆ. ಆದ್ದರಿಂದ, ನನ್ನ ಜೀವದಾಣೆ, ನೀನು ಹೇಗೆ ಅವರನ್ನು ನೋಯಿಸಿದೆಯೋ ಹಾಗೆಯೇ ನಾನು ನಿನ್ನನ್ನು ಶಿಕ್ಷಿಸುವೆನು. ಈ ರೀತಿಯಲ್ಲಿ, ನನ್ನ ಜನರೊಂದಿಗೆ ನಾನಿದ್ದೇನೆಂದು ಅವರಿಗೆ ತಿಳಿಯಪಡಿಸುವೆ. 12 ಆಗ ನಿನ್ನ ಎಲ್ಲಾ ತುಚ್ಛಮಾತುಗಳನ್ನು ನಾನು ಕೇಳಿರುತ್ತೇನೆ ಎಂದು ನೀನು ತಿಳಿದುಕೊಳ್ಳುವೆ. “ಇಸ್ರೇಲ್ ಪರ್ವತದ ವಿರುದ್ಧವಾಗಿ ನೀನು ಆಡಿದ ಉದ್ರೇಕಕಾರಿಯಾದ ಸಂಗತಿಗಳನ್ನೆಲ್ಲ ನಾನು ಕೇಳಿದ್ದೇನೆ. ‘ಇಸ್ರೇಲ್ ನಾಶವಾಯಿತು. ಈಗ ಅದನ್ನು ಲೂಟಿ ಮಾಡೋಣ’ ಎಂದು ನೀನು ಹೇಳಿದಿ. 13 ನಿನ್ನ ಹೆಮ್ಮೆಯಿಂದ ನನ್ನ ವಿರುದ್ಧವಾಗಿ ಮಾತನಾಡಿದ್ದೀ, ನೀನು ಅನೇಕ ಬಾರಿ ಹೇಳಿರುತ್ತೀ. ನಾನೆಲ್ಲವನ್ನು ಕೇಳಿದ್ದೇನೆ.” 14 ನನ್ನ ಒಡೆಯನಾದ ಯೆಹೋವನ ನುಡಿ ಇದು: “ಪ್ರಪಂಚದ ಎಲ್ಲಾ ದೇಶಗಳು ನಾನು ನಿನ್ನನ್ನು ನಾಶಮಾಡುವಾಗ ಸಂತೋಷಿಸುವವು. 15 ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವೆ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವೆ.” |
Kannada Holy Bible: Easy-to-Read Version
All rights reserved.
© 1997 Bible League International
Bible League International