Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 3 - ಪರಿಶುದ್ದ ಬೈಬಲ್‌


ಹತೋಟಿಮೀರಿ ಮಾತಾಡಬೇಡಿ

1 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.

2 ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ.

3 ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು.

4 ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ.

5 ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ.

6 ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.

7 ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ.

8 ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ.

9 ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ.

10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು.

11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ!

12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.


ನಿಜವಾದ ಜ್ಞಾನ

13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ.

14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ.

15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು.

16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ.

17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು.

18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು