Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಫಿಲಿಪ್ಪಿಯವರಿಗೆ 4 - ಪರಿಶುದ್ದ ಬೈಬಲ್‌


ಮಾಡಬೇಕಾದ ಕಾರ್ಯಗಳು

1 ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.

2 ಪ್ರಭುವಿನಲ್ಲಿ ಒಂದೇ ಮನಸ್ಸನ್ನು ಹೊಂದಿರಬೇಕೆಂದು ನಾನು ಯವೋದ್ಯಳನ್ನೂ ಸಂತುಕೆಯನ್ನೂ ಕೇಳಿಕೊಳ್ಳುತ್ತೇನೆ.

3 ನನ್ನ ಸ್ನೇಹಿತನೇ, ನೀನು ನನ್ನ ಜೊತೆಕೆಲಸದವನಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವುದರಿಂದ ಈ ಸ್ತ್ರೀಯರಿಗೂ ನೀನು ಸಹಾಯ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. ಈ ಸ್ತ್ರೀಯರು ನನ್ನೊಂದಿಗೆ ಸುವಾರ್ತೆಗೋಸ್ಕರ ಸೇವೆ ಮಾಡಿದ್ದಾರೆ. ನನ್ನೊಂದಿಗೆ ಸೇವೆ ಮಾಡುತ್ತಿದ್ದ ಕ್ಲೇಮೆನ್ಸ್ ಮತ್ತು ಇತರ ಸೇವಕರೊಡನೆ ಈ ಸ್ತ್ರೀಯರು ಸೇವೆ ಮಾಡಿದ್ದಾರೆ. ಅವರ ಹೆಸರುಗಳು ಜೀವಬಾಧ್ಯರ ಪುಸಕ್ತದಲ್ಲಿ ಬರೆಯಲ್ಪಟ್ಟಿವೆ.

4 ಯಾವಾಗಲೂ ಪ್ರಭುವಿನಲ್ಲಿ ಆನಂದಿಸಿರಿ; ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.

5 ನಿಮ್ಮ ಮೃದುಸ್ವಭಾವವನ್ನೂ ಕರುಣೆಯನ್ನೂ ಜನರೆಲ್ಲರೂ ನೋಡುವಂತಾಗಲಿ. ಪ್ರಭುವು ಬೇಗನೆ ಬರುತ್ತಾನೆ.

6 ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ.

7 ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

8 ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ.

9 ನೀವು ನನ್ನಿಂದ ಕಲಿತುಕೊಂಡದ್ದನ್ನು, ಹೊಂದಿಕೊಂಡದ್ದನ್ನು, ಕೇಳಿದ್ದನ್ನು ಮತ್ತು ಕಣ್ಣಾರೆ ಕಂಡದ್ದನ್ನು ಮಾಡಿರಿ. ಆಗ, ಶಾಂತಿಯನ್ನು ಕೊಡುವ ದೇವರು ನಿಮ್ಮೊಂದಿಗಿರುವನು.


ಫಿಲಿಪ್ಪಿ ಕ್ರೈಸ್ತರಿಗೆ ಪೌಲನ ವಂದನೆ

10 ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ.

11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ.

12 ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ.

13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

14 ಆದರೂ ನಾನು ಕೊರತೆಯಲ್ಲಿದ್ದಾಗ ನೀವು ನನಗೆ ಸಹಾಯ ಮಾಡಿದ್ದು ಒಳ್ಳೆಯದಾಯಿತು.

15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ.

16 ನಾನು ಥೆಸಲೋನಿಕದಲ್ಲಿದ್ದಾಗ ನನಗೆ ಅಗತ್ಯವಾದವುಗಳನ್ನು ನೀವು ಹಲವಾರು ಸಲ ಕಳುಹಿಸಿಕೊಟ್ಟಿರಿ.

17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ.

18 ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ.

19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.

20 ನಮ್ಮ ತಂದೆಯಾದ ದೇವರಿಗೆ ಸದಾಕಾಲ ಮಹಿಮೆಯಾಗಲಿ. ಆಮೆನ್.

21 ದೇವಜನರೆಲ್ಲರಿಗೂ ಕ್ರಿಸ್ತ ಯೇಸುವಿನಲ್ಲಿ ನನ್ನ ವಂದನೆ ತಿಳಿಸಿ. ನನ್ನೊಂದಿಗಿರುವ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ.

22 ಎಲ್ಲಾ ದೇವಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ. ಸೀಸರನ ಅರಮನೆಯಲ್ಲಿರುವ ವಿಶ್ವಾಸಿಗಳೂ ಸಹ ನಿಮಗೆ ವಂದನೆ ತಿಳಿಸಿದ್ದಾರೆ.

23 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು