Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 7 - ಪರಿಶುದ್ದ ಬೈಬಲ್‌


ಪ್ರಿಯಕರನ ಪ್ರಶಂಸೆ

1 ರಾಜಕುಮಾರಿಯೇ, ಪಾದರಕ್ಷೆಗಳಲ್ಲಿರುವ ನಿನ್ನ ಪಾದಗಳು ಎಷ್ಟೋ ಸುಂದರವಾಗಿವೆ. ನಿನ್ನ ದುಂಡಾದ ತೊಡೆಗಳು ಶಿಲ್ಪಿಯು ಮಾಡಿದ ಆಭರಣಗಳಂತಿವೆ.

2 ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ ಗುಂಡು ಬಟ್ಟಲಿನಂತಿದೆ. ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ ಗೋಧಿಯ ರಾಶಿಯಂತಿದೆ.

3 ನಿನ್ನ ಸ್ತನಗಳು ಪ್ರಾಯದ ಸಾರಂಗದ ಎರಡು ಅವಳಿ ಮರಿಗಳಂತಿವೆ.

4 ನಿನ್ನ ಕೊರಳು ದಂತಗೋಪುರದಂತಿದೆ. ನಿನ್ನ ಕಣ್ಣುಗಳು ಬತ್‌ರಬ್ಬೀಮ್‌ನ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಸರೋವರಗಳಂತಿವೆ. ನಿನ್ನ ಮೂಗು ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದಂತಿದೆ.

5 ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ. ನಿನ್ನ ತಲೆಕೂದಲು ರೇಷ್ಮೆಯಂತಿದೆ. ನಿನ್ನ ಉದ್ದವಾದ, ಸುಂದರವಾದ ಕೂದಲು ರಾಜನನ್ನು ಸಹ ಆಕರ್ಷಿಸುತ್ತದೆ!

6 ಪ್ರಿಯಳೇ, ನೀನೆಷ್ಟೋ ಸೌಂದರ್ಯವತಿ. ನಿನ್ನ ರೂಪ ಮನೋಹರ; ನಿನ್ನ ಪ್ರೇಮವು ಆನಂದ ಪೂರ್ಣವಾಗಿದೆ.

7 ನೀನು ಖರ್ಜೂರದ ಮರದಂತೆ ಎತ್ತರವಾಗಿರುವೆ. ನಿನ್ನ ಸ್ತನಗಳು ಖರ್ಜೂರ ಮರದ ಹಣ್ಣಿನ ಗೊಂಚಲುಗಳಂತಿವೆ.

8 ನಾನು ಖರ್ಜೂರದ ಮರವನ್ನು ಹತ್ತುವೆನು. ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು. ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ. ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.

9 ನಿನ್ನ ಬಾಯಿ ಉತ್ತಮವಾದ ದ್ರಾಕ್ಷಾರಸದಂತಿರಲಿ. ನನ್ನ ಪ್ರಿಯೆಗಾಗಿ ಈ ದ್ರಾಕ್ಷಾರಸವು ಮೆಲ್ಲನೆ ಇಳಿದುಹೋಗುವುದು. ನಿದ್ರಿಸುವವರ ತುಟಿಗಳಲ್ಲಿ ಅದು ಸರಾಗವಾಗಿ ಹರಿದುಹೋಗುವುದು.


ಪ್ರಿಯತಮೆ ಪ್ರಿಯಕರನಿಗೆ

10 ನಾನು ನನ್ನ ಪ್ರಿಯನವಳೇ. ಅವನಿಗೆ ನನ್ನ ಮೇಲೇ ಆಸೆ.

11 ನನ್ನ ಪ್ರಿಯನೇ, ಬಾ! ನಾವು ತೋಟಕ್ಕೆ ಹೋಗೋಣ, ನಾವು ಹಳ್ಳಿಗಳಲ್ಲಿ ಇರೋಣ.

12 ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ. ದ್ರಾಕ್ಷೆಯು ಚಿಗುರಿದೆಯೋ ಅದರ ಹೂವು ಅರಳಿದೆಯೋ ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ. ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.

13 ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ. ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು ನಮ್ಮ ಬಾಗಿಲ ಬಳಿಯಲ್ಲಿವೆ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು