Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 4 - ಪರಿಶುದ್ದ ಬೈಬಲ್‌


ಪ್ರಿಯಕರನು ಪ್ರಿಯತಮೆಗೆ

1 ನನ್ನ ಪ್ರಿಯಳೇ, ನೀನು ಬಹಳ ಸುಂದರಿ! ನೀನು ರೂಪವತಿ! ಮುಸುಕಿನೊಳಗಿರುವ ನಿನ್ನ ಕಣ್ಣುಗಳು ಕೋಮಲವಾದ ಪಾರಿವಾಳಗಳಂತಿವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.

2 ನಿನ್ನ ಹಲ್ಲುಗಳು ಉಣ್ಣೆ ಕತ್ತರಿಸಿದ ನಂತರ ಸ್ನಾನ ಮಾಡಿಕೊಂಡು ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.

3 ನಿನ್ನ ತುಟಿಗಳು ರೇಷ್ಮೆಯ ಕೆಂಪುದಾರದಂತಿವೆ. ನಿನ್ನ ಬಾಯಿ ಸುಂದರವಾಗಿದೆ. ಮುಸುಕಿನೊಳಗಿರುವ ನಿನ್ನ ಕೆನ್ನೆಗಳು ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.

4 ನಿನ್ನ ಕೊರಳು ದಾವೀದನ ಗೋಪುರದಂತೆ ಉದ್ದವಾಗಿದೆ ಮತ್ತು ತೆಳುವಾಗಿದೆ. ಆ ಗೋಪುರದ ಗೋಡೆಗಳು ಸಾವಿರ ಗುರಾಣಿಗಳಿಂದಲೂ ಬಲಿಷ್ಠ ಸೈನಿಕರ ಗುರಾಣಿಗಳಿಂದಲೂ ಅಲಂಕೃತವಾಗಿವೆ.

5 ನಿನ್ನ ಎರಡು ಸ್ತನಗಳು ಅವಳಿಜವಳಿ ಜಿಂಕೆಮರಿಗಳಂತೆಯೂ ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ ಅವಳಿಜವಳಿ ಸಾರಂಗಗಳಂತೆಯೂ ಇವೆ.

6 ಹಗಲು ತನ್ನ ಕೊನೆ ಉಸಿರೆಳೆಯುವವರೆಗೆ ಮತ್ತು ನೆರಳುಗಳೆಲ್ಲಾ ಓಡಿಹೋಗುವವರೆಗೆ ನಾನು ಗೋಲರಸದ ಬೆಟ್ಟಕ್ಕೂ ಧೂಪದ ಗುಡ್ಡಕ್ಕೂ ಹೋಗುವೆನು.

7 ನನ್ನ ಪ್ರಿಯೆ, ನೀನು ಸರ್ವಾಂಗಸುಂದರಿ. ನಿನಗೆ ಎಲ್ಲಿಯೂ ಕಲೆಗಳಿಲ್ಲ!

8 ನನ್ನ ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! ಲೆಬನೋನಿನಿಂದ ನನ್ನೊಂದಿಗೆ ಬಾ! ಅಮಾನದ ತುದಿಯಿಂದಲೂ ಶೆನೀರಿನ ತುದಿಯಿಂದಲೂ ಹೆರ್ಮೋನಿನ ತುದಿಯಿಂದಲೂ ಸಿಂಹದ ಗವಿಗಳಿಂದಲೂ ಚಿರತೆಗಳ ಬೆಟ್ಟಗಳಿಂದಲೂ ಬಾ!

9 ನನ್ನ ಪ್ರಿಯಳೇ, ನನ್ನ ವಧುವೇ, ನೀನು ನನ್ನ ಹೃದಯವನ್ನು ಅಪಹರಿಸಿರುವೆ. ನಿನ್ನ ನೋಟದಿಂದಲೂ ನಿನ್ನ ಮುತ್ತಿನಹಾರದಿಂದಲೂ ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದಿ.

10 ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳವು ಸಕಲ ಬಗೆಯ ಸುಗಂಧ ದ್ರವ್ಯಗಳಿಗಿಂತಲೂ ಉತ್ತಮ!

11 ನನ್ನ ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯೊಳಗಿವೆ. ನಿನ್ನ ಬಟ್ಟೆಗಳು ಪರಿಮಳದ್ರವ್ಯದಂತೆ ಸುವಾಸನೆಭರಿತವಾಗಿವೆ.

12 ನನ್ನ ಪ್ರಿಯಳೇ, ನನ್ನ ವಧುವೇ, ನೀನು ಕದಹಾಕಿದ ತೋಟದಂತಿರುವೆ; ಬೇಲಿಯೊಳಗಿರುವ ಬುಗ್ಗೆಯಂತಿರುವೆ; ಮುಚ್ಚಿ ಮುದ್ರಿಸಿದ ಚಿಲುಮೆಯಂತಿರುವೆ.

13 ನಿನ್ನ ಅಂಗಾಂಗಗಳು ದಾಳಿಂಬೆ ಮರಗಳಿಂದಲೂ ರುಚಿಕರವಾದ ಹಣ್ಣಿನ ಮರಗಳಿಂದಲೂ ಗೋರಂಟಿ,

14 ನಾರ್ಡ್, ಜಟಾಮಾಂಸಿ, ಕೇಸರಿ, ಬಜೆ, ಲವಂಗಚಕ್ಕೆ, ರಕ್ತಬೋಳ, ಅಗುರು, ಸಾಂಬ್ರಾಣಿ ಗಿಡ ಮತ್ತು ದಾಲ್ಚಿನ್ನಿ ಎಂಬ ಸುಗಂಧದ ಸಸ್ಯಗಳಿಂದಲೂ ಕೂಡಿರುವ ತೋಟಗಳಂತಿವೆ.

15 ನೀನು ತೋಟದ ಬುಗ್ಗೆಯಂತಿರುವೆ; ಹೊಸ ನೀರಿನ ಬಾವಿಯಂತಿರುವೆ; ಲೆಬನೋನಿನ ಬೆಟ್ಟಗಳಿಂದ ಹರಿದುಬರುತ್ತಿರುವ ನೀರಿನಂತಿರುವೆ.


ಪ್ರಿಯತಮೆ

16 ಉತ್ತರದ ಗಾಳಿಯೇ, ಎಚ್ಚರವಾಗು! ದಕ್ಷಿಣದ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು. ಅದರ ಸುವಾಸನೆಯು ಹರಡಿಕೊಳ್ಳಲಿ. ನನ್ನ ಪ್ರಿಯನು ನನ್ನ ತೋಟವನ್ನು ಪ್ರವೇಶಿಸಲಿ. ಅವನು ಅದರ ರುಚಿಕರವಾದ ಹಣ್ಣನ್ನು ತಿನ್ನಲಿ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು